ಶಿವಮೊಗ್ಗ: ನಿದಿಗೆಯ ಶ್ರೀ ಕಲ್ಲೇಶ್ವರ ದೇವಸ್ಥಾನದ ಬಾಗಿಲ ಬೀಗ ಮುರಿದು, ದೇವತಾ ವಿಗ್ರಹಗಳು ಹಾಗೂ ಕಾಣಿಕೆ ಡಬ್ಬಿಯನ್ನು ಕಳ್ಳರು ದೋಚಿದ್ದಾರೆ.
ಸೆಪ್ಟೆಂಬರ್ 27ರ ಸಂಜೆ ದೇವಸ್ಥಾನದ ಅರ್ಚಕ ವೀರೇಶ್ ಹಿರೇಮಠ ಅವರು ಪೂಜೆ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಿಗ್ಗೆ ದೇವಸ್ಥಾನದ ಕೋಶಾಧ್ಯಕ್ಷ ಎನ್.ಜಿ. ಹಾಲನಗೌಡ ಅವರು ದೇವಸ್ಥಾನದ ಬಳಿ ತೆರಳಿದಾಗ ಬಾಗಿಲು ತೆರೆದಿರುವುದು ಕಂಡುಬಂದಿದೆ. ಅನುಮಾನಗೊಂಡು ಹತ್ತಿರ ಹೋಗಿ ಪರಿಶೀಲಿಸಿದಾಗ, ದೇವಸ್ಥಾನದ ಬಾಗಿಲ ಬೀಗ ಒಡೆದಿರುವುದು ಗೊತ್ತಾಗಿದೆ.

ಪರಿಶೀಲಿಸಿದಾಗ ಗರ್ಭಗುಡಿಯಲ್ಲಿದ್ದ ಸುಮಾರು 12 ಕೆಜಿ ತೂಕದ ಕಲ್ಲೇಶ್ವರ ದೇವರ ಕಂಚಿನ ವಿಗ್ರಹ, 100 ಗ್ರಾಂ ತೂಕದ ಬೆಳ್ಳಿಯ ಬಸವಣ್ಣನ ವಿಗ್ರಹ, 4 ಕೆಜಿ ತೂಕದ ತಾಮ್ರದ ಅಭಿಷೇಕದ ಪಾತ್ರೆ, ಹಿತ್ತಾಳೆಯ ಸರಪಳಿ, ಹಿತ್ತಾಳೆಯ 2 ಗಣಪತಿ ವಿಗ್ರಹಗಳು ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ₹5,000 ನಗದು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ₹30,000 ಎಂದು ಅಂದಾಜಿಸಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.