SHIVAMOGGA LIVE NEWS | 14 AUGUST 2023
CHANDRAGUTTI : ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ (RENUKAMBA TEMPLE) ನಡೆದ ಕಳ್ಳತನ ಯತ್ನ (Theft Attempt) ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾರೆಲ್ಲ ಅರೆಸ್ಟ್ ಆಗಿದ್ದಾರೆ?
ಆ.3ರಂದು ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ ಕಳ್ಳತನಕ್ಕೆ (Theft Attempt) ಯತ್ನಿಸಲಾಗಿತ್ತು. ಹುಂಡಿ ಒಡೆಯುವ ಪ್ರಯತ್ನವಾಗಿತ್ತು. ದೇವರ ಬೆಳ್ಳಿಯ ಮುಖವಾಡವನ್ನು ಕಳಚಲಾಗಿತ್ತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಆರೋಪಿಗಲ ಪತ್ತೆಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ವಿಶೇಷ ತಂಡ ರಚಿಸಿದ್ದರು. ತನಿಖೆ ನಡೆಸಿದ ತಂಡ, ಬನವಾಸಿ ಬಸ್ ನಿಲ್ದಾಣದ ಬಳಿ ಮೂವರು ಆರೋಪಿಗಳನ್ನು ಬಂಧಿಸಿದೆ. ಚಂದ್ರಗುತ್ತಿ ಗ್ರಾಮದ ಭೋವಿ ಕಾಲೋನಿಯ ಪ್ರವೀಣ್ (33), ದೇವರಾಜ (50), ಭೀಮಪ್ಪ (35) ಬಂಧಿತರು.
ಇದನ್ನೂ ಓದಿ – ಚಂದ್ರಗುತ್ತಿ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ, ವಿಶೇಷ ತನಿಖಾ ತಂಡಕ್ಕೆ ಒತ್ತಾಯ, ಭಕ್ತರ ಅನುಮಾನವೇನು?
ಕಳಂಕ ತರುವ ಯತ್ನ
ಚಂದ್ರಗುತ್ತಿಯ ಭೋವಿ ಕಾಲೋನಿಯ ದೇವರಾಜ, ದೇವಸ್ಥಾನದ ಕಮಿಟಿಗೆ ಸೇರಲು ಅರ್ಜಿ ಸಲ್ಲಿಸಿದ್ದ. ಅದು ತಿರಸ್ಕೃತಗೊಂಡಿತ್ತು. ದೇವಸ್ಥಾನ ಕಮಿಟಿಯ ಅಧ್ಯಕ್ಷರೆ ಇದಕ್ಕೆ ಕಾರಣ ಎಂದು ಆರೋಪಿಗಳು ಭಾವಿಸಿದ್ದರು. ಹಾಗಾಗಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾಡಿದರೆ ಅಧ್ಯಕ್ಷರ ಹೆಸರಿಗೆ ಕಳಂಕ ಬರಲಿದೆ. ಅವರನ್ನು ಕಮಿಟಿಯಿಂದ ತೆಗೆಸಬಹುದು ಎಂದು ಭಾವಿಸಿ ಕಳ್ಳತನಕ್ಕೆ ಯತ್ನಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಚಂದ್ರಗುತ್ತಿ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ, ಎಷ್ಟು ಕಾಣಿಕೆ ಸಂಗ್ರಹವಾಗಿದೆ?
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ, ಶಿಕಾರಿಪುರ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸೊರಬ ಠಾಣೆ ಇನ್ಸ್ಪೆಕ್ಟರ್ ರಾಜಶೇಖರ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸೊರಬ ಠಾಣೆ ಸಬ್ ಇನ್ಸ್ಪೆಕ್ಟರ್ಗಳಾದ ನಾಗರಾಜ್ ಮತ್ತು ಮಾಳಪ್ಪ ವೈ.ಚಿಪ್ಪಲಕಟ್ಟಿ, ಸಿಬ್ಬಂದಿ ಪಿ.ಸಿ.ರಾಘವೇಂದ್ರ, ವಿನಯ್, ಸಂದೀಪ್ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200