ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹುಣಸೋಡು ಸ್ಪೋಟ ಪ್ರಕರಣದ ಬಳಿಕವು ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ತೋರುತ್ತಿಲ್ಲ. ಸ್ಪೋಟಕ ಸಾಗಣೆ ವಿಚಾರವಾಗಿ ಆಡಳಿತ ಯಂತ್ರ ನಿರ್ಲಕ್ಷ್ಯ ವಹಿಸಿದಂತೆ ತೋರುತ್ತಿದೆ. ಸ್ಪೋಟಕ ತುಂಬಿದ್ದ ಲಾರಿಯೊಂದನ್ನು ಶಿವಮೊಗ್ಗ ನಗರದ ನಡುವೆ ರಿಪೇರಿಗೆ ನಿಲ್ಲಿಸಿದ್ದೆ ಇದಕ್ಕೆ ಸಾಕ್ಷಿಯಾಗಿದೆ. ಯಾವುದೆ ಭದ್ರತೆ ಇಲ್ಲದೆ, ಮುನ್ನೆಚ್ಚರಿಕಾ ಕ್ರಮಗಳು ಇಲ್ಲದೆ ಲಾರಿಯನ್ನು ನಡು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು.
ಶಿವಮೊಗ್ಗದ ಬೈಪಾಸ್ ರಸ್ತೆಯ ಗ್ಯಾರೇಜ್’ನಲ್ಲಿ ಇವತ್ತು ಲಾರಿಯೊಂದನ್ನು ರಿಪೇರಿಗಾಗಿ ನಿಲ್ಲಿಸಲಾಗಿತ್ತು. ಲಾರಿಯ ಮುಂದಿನ ಚಕ್ರ ಬಿಚ್ಚಿ ಗ್ಯಾರೇಜ್’ನಲ್ಲಿ ರಿಪೇರಿ ಮಾಡಲಾಗುತ್ತಿತ್ತು. ಬಹುಹೊತ್ತು ರಿಪೇರಿ ಕಾರ್ಯ ನಡೆದಿದೆ.
ಸ್ಥಳೀಯರಲ್ಲಿ ಸ್ಪೋಟಕದ ಅನುಮಾನ
ಗ್ಯಾರೇಜ್’ನಲ್ಲಿ ನಿಂತಿದ್ದ ಲಾರಿ ಸಾಮಾನ್ಯ ಲಾರಿಗಳಂತೆ ಇರಲಿಲ್ಲ. ಗೂಡ್ಸ್ ತುಂಬಾ ಜಾಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಒಳಗೇನಿದೆ ಎಂಬುದನ್ನು ಕಾಣದಂತೆ ಲಾಕ್ ಮಾಡಲಾಗಿತ್ತು. ಇದೇ ಕಾರಣಕ್ಕೆ ಸ್ಥಳೀಯರೊಬ್ಬರು ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಖಾಕಿ ಟೀಮ್
ವಿಚಾರ ತಿಳಿಯುತ್ತಿದ್ದಂತೆ ಡಿವೈಎಸ್’ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿದೆ. ಲಾರಿ ಚಾಲಕನ ವಿಚಾರಣೆ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಬೇಗ ರಿಪೇರಿ ಕಾರ್ಯ ಮುಗಿಸುವಂತೆ ಗ್ಯಾರೇಜ್ ಸಿಬ್ಬಂದಿಗಳಿಗೆ ಸೂಚಿಸಲಾಯಿತು.
ಲಾರಿಯಲ್ಲಿ ಏನೆಲ್ಲ ಸ್ಪೋಟಕವಿತ್ತು?
ಲಾರಿ ಉಡುಪಿಯಿಂದ ಚಿತ್ರದುರ್ಗದ ಸಿಂಗಾಪುರಕ್ಕೆ ತೆರಳುತಿತ್ತು. ಇದರಲ್ಲಿ ಕೆಲ್ವಿಕ್ಸ್ 220 ಮಾದರಿಯ 1500 ಕೆ.ಜಿ ತೂಕದ ಜಿಲೆಟಿನ್ ಕಡ್ಡಿಗಳಿದ್ದವು. ಪೊಲೀಸರು ದಾಖಲೆಗಳ ಪರಿಶೀಲನೆ ವೇಳೆ ಇದು ತಿಳಿದು ಬಂದಿದೆ.
ರೂಲ್ಸ್ ಹೇಳುವುದೇನು?
ಸ್ಪೋಟಕ ಕಾಯ್ದೆ 2008ರ ಅಡಿಯಲ್ಲಿ ಸ್ಪೋಟಕಗಳ ಸಾಗಣೆ ಸಂಬಂಧ ಪ್ರತ್ಯೇಕ ನಿಯಮಗಳಿವೆ. ಅದರ ಅನ್ವಯ ಈಗ ಸಾಗಣೆ ಮಾಡುತ್ತಿದ್ದ ಕೆಲ್ವಿಕ್ಸ್ 220 ಮಾದರಿಯ ಜಿಲೆಟಿನ್ ಕಡ್ಡಿಗಳು ಕ್ಲಾಸ್ 2ರಂದು ಪರಿಗಣಿಸಲಾಗಿದೆ.
ಕ್ಲಾಸ್ 2 ಮಾದರಿಯ ಸ್ಪೋಟಕದ ಜೊತೆಗೆ ಡಿಟೊನೇಟರ್’ಗಳ ಸಾಗಣೆ ಮಾಡುವಂತಿಲ್ಲ. ಬೈಪಾಸ್ ರಸ್ತೆಯಲ್ಲಿ ಸಿಕ್ಕ ಲಾರಿಯಲ್ಲಿ ಡಿಟೊನೇಟರ್’ಗಳು ಇರಲಿಲ್ಲ.
ಇದನ್ನೂ ಓದಿ | ಕಲ್ಲಗಂಗೂರು ಸ್ಪೋಟ ಕೇಸ್, ಪೀಸ್ ಪೀಸ್ ಆಗಿದ್ದ ಮೃತದೇಹದ ಗುರುತು ಏಳು ತಿಂಗಳ ಬಳಿಕ ಪತ್ತೆ
15 ಟನ್’ಗಿಂತಲೂ ಹೆಚ್ಚಿನ ತೂಕದ ಕ್ಲಾಸ್ 2 ಮಾದರಿಯ ಸ್ಪೋಟಕವನ್ನು ಸಾಗಿಸುವಂತಿಲ್ಲ. ಈ ಲಾರಿಯಲ್ಲಿ 1500 ಕೆ.ಜಿಯಷ್ಟು ಜಿಲೆಟಿನ್ ಕಡ್ಡಿಯಷ್ಟೆ ಇತ್ತು.
ಸ್ಪೋಟಕ ಸಾಗಣೆ ಮಾಡುವ ವಾಹನ ಯಾವ್ಯಾವ ಜಿಲ್ಲೆಯಲ್ಲಿ ಸಾಗುತ್ತದೆಯೋ ಆಯಾ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಬೇಕು. ಈ ಲಾರಿಯಲ್ಲಿದ್ದ ಸ್ಪೋಟಕ ಸಾಗಣೆ ಸಂಬಂಧ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಮಾಹಿತಿ ರವಾನಿಸಲಾಗಿದೆ ಎಂದು ದಾಖಲೆಯಲ್ಲಿ ತಿಳಿಸಲಾಗಿತ್ತು.
ಎಡವಿತಾ ಆಡಳಿತ ಯಂತ್ರ?
ಸ್ಪೋಟಕಗಳಿಂದ ಭೀತಿ ತಪ್ಪಿದ್ದಲ್ಲ. ಆದರೂ ಸ್ಪೋಟಕ ತುಂಬಿದ್ದ ಲಾರಿ ಶಿವಮೊಗ್ಗ ಪ್ರವೇಶಿಸಿದ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಇರದಿರುವುದು ಆತಂಕದ ವಿಚಾರ. ಸ್ಥಳೀಯರು ಕರೆ ಮಾಡಿದ ಬಳಿಕವಷ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು, ಸ್ಪೋಟಕ ತುಂಬಿದ್ದ ಲಾರಿಯನ್ನು ಜನನಿಬಿಡ ಮತ್ತು ವಸತಿ ಪ್ರದೇಶದಲ್ಲಿ ನಿಲ್ಲಿಸಿ, ರಿಪೇರಿ ಮಾಡಿಸಿದ್ದು ಜನರ ಸುರಕ್ಷತೆಯ ದೃಷ್ಟಿಯಿಂದ ಭಾರಿ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ | SHIMOGA | ‘ಕಲ್ಲು ಕ್ವಾರಿಗಳಲ್ಲಿ ಪ್ರಭಾವಿಗಳಿದ್ದಾರೆ, ರಾಜಕಾರಣಿಗಳನ್ನೆ ಆಟ ಆಡಿಸುತ್ತಿದ್ದಾರೆ’
ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದ ನೆನಪು ಹಸಿರಾಗಿದೆ. ಈ ಸಂದರ್ಭದಲ್ಲೇ ಸ್ಪೋಟಕ ತುಂಬಿದ್ದ ಲಾರಿಯನ್ನು ನಡುರಸ್ತೆಯಲ್ಲಿ ನಿಲ್ಲಿಸಿದ್ದು ಜಿಲ್ಲಾಡಳಿತ ಲೋಪ ಎಂಬುದು ಸಾರ್ವಜನಿಕರ ಆರೋಪವಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200