SHIVAMOGGA LIVE NEWS | 1 APRIL 2024
HOSANAGARA : ಕೊಟ್ಟ ಹಣ ಮರಳಿಸುವಂತೆ ಕೇಳಿದ ಮಹಿಳೆಯ ಕೊಲೆ ಮಾಡಿ ಮೃತದೇಹವನ್ನು ಕೆರೆಗೆ ಎಸೆಯಲಾಗಿದೆ. ತನಿಖೆ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ್ನು ವಶಕ್ಕೆ ಪಡೆಯಲಾಗಿದೆ.
ಕೆರೆಯಲ್ಲಿ ತೇಲುತ್ತಿತ್ತು ಜಯಮ್ಮನ ಶವ
ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹುಂಚ ಗ್ರಾಮದ ಮುತ್ತಿನ ಕೆರೆಯಲ್ಲಿ ಮಾ.18ರಂದು ಮಹಿಳೆಯೊಬ್ಬರ ಮೃತದೇಹ ತೇಲುತ್ತಿತ್ತು. ಮೃತದೇಹವನ್ನು ಕೆರೆಯಿಂದ ಹೊರ ತೆಗೆದು ವಾರಸುದಾರರ ಪತ್ತೆಗೆ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಹೊನ್ನಾಳಿಯ ಸಿದ್ದಪ್ಪ ಎಂಬುವವರು ಮೃತದೇಹವನ್ನು ಪರಿಶೀಲಿಸಿ ತಮ್ಮ ಅತ್ತೆ ಹೊಳಲೂರಿನ ನಿವಾಸಿ ಜಯಮ್ಮ ಎಂದು ಗುರುತಿಸಿದ್ದರು.
ಗುರುತು ಪತ್ತೆ ಬಳಿಕ ತನಿಖೆ ಚುರುಕು
ತನಿಖೆ ಚುರುಕುಗೊಳಿಸಿದ ಪೊಲೀಸರು ಕೋಡೂರು ಯಳಗಲ್ಲು ಗ್ರಾಮದ ನಿವಾಸಿ ಕೆ.ಕೆ.ಮಯೂರ (24) ಎಂಬಾತನನ್ನು ಬಂಧಿಸಿದ್ದಾರೆ. ಈತನ ಜೊತೆಗೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮಯೂರನ ಅತ್ತೆ ಕೆಲಸ ಮಾಡುತ್ತಿದ್ದ ಆಶ್ರಮದಲ್ಲಿ ಜಯಮ್ಮ ಕೂಡ ಕೆಲಸ ಮಾಡುತ್ತಿದ್ದರು. ಅತ್ತೆಯ ಕಡೆಯಿಂದ ಜಯಮ್ಮ ಪರಿಚಯವಾಗಿದ್ದರು. ಅವರಿಂದ ಮೂಯೂರ ಸಾಲ ಪಡೆದಿದ್ದ. ಕೆಲ ಸಮಯದ ಬಳಿಕ ಸಾಲದ ಹಣ ಮರಳಿಸುವಂತೆ ಜಯಮ್ಮ ಕೇಳಿದ್ದರು. ಜಯಮ್ಮಳ ಬಳಿ ಹಣ ಮತ್ತು ಚಿನ್ನಾಭರಣವಿದೆ ಎಂದು ಭಾವಿಸಿ, ಆಕೆಯ ಹತ್ಯೆ ಮಾಡಿದರೆ ಹಣ, ಚಿನ್ನ ತನ್ನದಾಗಿಸಿಕೊಳ್ಳಬಹುದು. ಸಾಲದ ಕಿರಿಕಿರಿ ತಪ್ಪಲಿದೆ ಎಂದು ಕೊಲೆಗೈದಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೈಟ್ ತೋರಿಸುವುದಾಗಿ ನಂಬಿಸಿ ಕರೆದೊಯ್ದರು
ಜಯಮ್ಮಳಿಗೆ ಮಯೂರ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ರಿಪ್ಪನ್ಪೇಟೆಯಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿದ್ದರು. ಮಾ.16ರಂದು ಕಾರಿನಲ್ಲಿ ಆಕೆಯನ್ನು ಕರೆದೊಯ್ದಿದ್ದರು. ಬಾಳೂರು ಗ್ರಾಮದ ಸಮೀಪ ಜಯಮ್ಮಳ ಕುತ್ತಿಗೆಗೆ ಹಿಂಬದಿಯಿಂದ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ನಂತರ ಕಲ್ಲಿನ ಬೇಲಿ ಕಂಬಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು, ಹುಂಚದ ಮುತ್ತಿನ ಕೆರೆಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಟೈರ್ ಸ್ಪೋಟ, ಸಿಟಿ ಬಸ್ಸಿನಲ್ಲಿ ಗುಂಡಿಯಾಗಿ ಕೆಳಗೆ ಬಿದ್ದ ಬಾಲಕಿ
ಡಿವೈಎಸ್ಪಿ ಗಜಾನನ ವಾಮನ ಸುತಾರ ಮೇಲ್ವಿಚಾರಣೆಯಲ್ಲಿ ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್.ಹೆಬ್ಬಾಳ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ರಿಪ್ಪನ್ಪೇಟೆ ಠಾಣೆ ಪಿಎಸ್ಐ ನಿಂಗಪ್ಪ ಕರಕಣ್ಣ, ಸಿಬ್ಬಂದಿ ಕಿರಣ್ ಕುಮಾರ್, ಉಮೇಶ್, ಶಿವಕುಮಾರ ನಾಯ್ಕ, ಸಂತೋಷ್ ಕೊರವರ, ಸುನಿಲ್ ಅವರ ತಂಡ ತನಿಖೆ ನಡೆಸಿತ್ತು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200