ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜೂನ್ 2020
ದಿನೇ ದಿನೇ ಹಸುಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಕಾರುಗಳಲ್ಲಿ ಬಂದು ಹಸುಗಳನ್ನು ಕದ್ದೊಯ್ಯುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿದ್ದವು. ಶಿವಮೊಗ್ಗ ತಾಲೂಕು ಲಕ್ಕಿನಕೊಪ್ಪ ಸಮೀಪ ಸಂಭವಿಸಿದ ಅಪಘಾತ ಪ್ರಕರಣದಿಂದ ಕಾರಿನಲ್ಲಿ ಹಸುಗಳನ್ನು ಕದ್ದೊಯ್ಯುವ ಪ್ರಕರಣ ಬಯಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಘಟನೆ?
ಸೋಮವಾರ ಬೆಳಗ್ಗೆ ಲಕ್ಕಿನಕೊಪ್ಪ ಗ್ರಾಮದ ಸಮೀಪ ಕಾರೊಂದು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದರು. ರಕ್ಷಣೆಗೆ ಬಂದಿದ್ದ ಸ್ಥಳೀಯರಿಗೆ ಕಾರಿನಲ್ಲಿ ಎರಡು ಹಸುಗಳಿದ್ದದ್ದು ಕಂಡು ಬಂದಿದೆ. ಅಪಘಾತದ ರಭಸಕ್ಕೋ, ಕಾರಿನಲ್ಲಿ ಅವುಗಳನ್ನು ತುಂಬಿದ್ದ ರೀತಿಗೋ ಅವೆರಡು ಮೃತಪಟ್ಟಿದ್ದವು.
ಹಸುಗಳ ಕಳ್ಳತನ ಗೊತ್ತಾಗಿದ್ದು ಹೇಗೆ?
ಉಂಬ್ಳೆಬೈಲು ಸಮೀಪದ ಗಾಣೆದಾಳು ಗ್ರಾಮದ ವಿಠಲ ಎಂಬುವವರು ಸೋಮವಾರ ಬೆಳಗ್ಗೆ ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ, ಎರಡು ಹಸುಗಳು ಕಣ್ಮರೆಯಾಗಿದ್ದವು. ಇದರಿಂದ ಆತಂಕಕ್ಕೀಡಾದ ವಿಠಲ ಅವರು ಸಮೀಪದಲ್ಲೆಲ್ಲ ಹುಡುಕಾಡಿದರು. ಅಕ್ಕಪಕ್ಕದ ಮನೆಯವರಿಗೂ ವಿಚಾರ ತಿಳಿಸಿದರು. ಈ ಹೊತ್ತಿಗಾಗಲೇ ಲಕ್ಕಿನಕೊಪ್ಪ ಸಮೀಪ ಕಾರು ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದಾಗ ಕಳ್ಳತನದ ವಿಚಾರ ಬಯಲಾಗಿದೆ.
ಹಸುಗಳನ್ನು ಕದ್ದವರು ಯಾರು?
ಹಸುಗಳ ಕಳ್ಳತನ ಮಾಡಿದ್ದವನ್ನು ಸ್ಥಳೀಯರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರನ್ನು ಶಿವಮೊಗ್ಗದ ಟಿಪ್ಪು ನಗರದ ಅಜ್ಜು, ಯಾಸೀನ್ ಮತು ಸುಹೈಲ್ ಎಂದು ಗುರುತಿಸಲಾಗಿದೆ. ಇವರನ್ನು ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಹಾರಕ್ಕೆ ಒತ್ತಾಯ
ಕಳ್ಳತನ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಹಸುಗಳನ್ನು ಕಳೆದುಕೊಂಡಿರುವ ವಿಠಲ ಅವರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಆಗಾಗ ಹಸುಗಳ ಕಳ್ಳತನ ಪ್ರಕರಣ ಸಂಭವಿಸುತ್ತಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]