ಶಿವಮೊಗ್ಗ ಲೈವ್.ಕಾಂ | 16 ಡಿಸೆಂಬರ್2018
ಲೋಕಸಭೆ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸೋಲಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಕಾರಣ ಅಂತಾ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ ಜನಸಾಮಾನ್ಯರಿಗೆ ಸಿಗುವುದಿಲ್ಲ. ಇನ್ನು, ತಾಲೂಕು ಜೆಡಿಎಸ್ ಅಧ್ಯಕ್ಷ ಮದನ್ ಮತ್ತು ಮೂಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ಮೂಲ ಮತ್ತು ವಲಸಿಗ ಕಾರ್ಯಕರ್ತರ ನಡುವಿನ ಬಿರುಕು ಕಡಿಮೆ ಮತ ಗಳಿಸಲು ಕಾರಣವಾಗಿದೆ ಎಂದರು.
ಮತ್ತೆ ಶಂಕುಸ್ಥಾಪನೆ ಮಾಡುತ್ತಿರುವ ಆರಗ

ತಾವು ಶಾಸಕರಾಗಿದ್ದಾಗ ಕೋಟಿಗಟ್ಟಲೆ ವೆಚ್ಚದ 6 ಗ್ರಾಮ ವಿಕಾಸ ಯೋಜನೆ ಮಂಜೂರಾಗಿತ್ತು. ಕಾಮಗಾರಿಯ ಶಂಕುಸ್ಥಾಪನೆ ಕೂಡ ಆಗಿತ್ತು. ಶಾಸಕ ಆರಗ ಜ್ಞಾನೇಂದ್ರ ಅವರು ಅದೇ ಕಾಮಗಾರಿಗೆ ಮತ್ತೊಮ್ಮೆ ಶಂಕುಸ್ಥಾಪನೆ ಮಾಡಿ, ಗುತ್ತಿಗೆದಾರರನ್ನು ಬದಲಾವಣೆ ಮಾಡಲು ಹೊರಟಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಬಿಜೆಪಿಗೆ ತಕ್ಕ ಪಾಠ ಕಲಿಸಿದ ಮತಾದರರು
ಕೋಮು ಸಂಘರ್ಷದ ವಿಷ ಬೀಜ ಬಿತ್ತಿ, ಆಡಳಿತ ಚುಕ್ಕಾಣಿ ಹಿಡಿಯಬಹುದು ಅಂದುಕೊಂಡಿದ್ದ ಬಿಜೆಪಿಗೆ ಪಂಚ ರಾಜ್ಯಗಳ ಚುನಾವಣೆ ತಕ್ಕ ಪಾಠ ಕಲಿಸಿದೆ ಎಂದು ತಿಳಿಸಿದ ಕಿಮ್ಮನೆ ರತ್ನಾಕರ್, ಈ ಚುನಾವಣೆಗಳು ದೇಶದ ದಿಕ್ಸೂಚಿ ಆಗಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾ.ಪಂ ಸದಸ್ಯ ಚಂದ್ರಮೌಳಿ, ಶ್ರೀನಿವಾಸ್ ಕಾಮತ್, ಪ್ರಭಾಕರ್ ರಾವ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | [email protected]