GOOD MORNING SHIVAMOGGA, 21 DECEMBER 2024
ಫಟಾಫಟ್ ಸುದ್ದಿ : ಶಿವಮೊಗ್ಗ ಜಿಲ್ಲೆಯಲ್ಲಿ ಏನೇನೆಲ್ಲ ಆಯ್ತು? ಇಲ್ಲಿದೆ ಫಟಾಫಟ್ ಸುದ್ದಿ ಅಪ್‌ಡೇಟ್.
![]() |
ಡಿಸಿ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ
ಶಿವಮೊಗ್ಗ : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.
Shivamogga Live
ಇದನ್ನೂ ಓದಿ » ‘ಜಗ್ಗುವುದಿಲ್ಲ, ಕುಗ್ಗುವುದಿಲ್ಲ, ಬೆದರಿಕೆಗೆ ಹೆದರುವುದಿಲ್ಲ’, ಬಿಜೆಪಿ ಆಕ್ರೋಶ
ಪ್ರಾಂಶುಪಾಲರ ವಿರುದ್ಧ ಮಿನಿಸ್ಟರ್‌ಗೆ ದೂರು
ಸೊರಬ : ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಕಾಲೇಜೊಂದರ ಪ್ರಾಂಶುಪಾಲರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
Shivamogga Live
ಕಂದಕಕ್ಕೆ ಬೈಕ್ ಸಹಿತ ಬಿದ್ದ ಸವಾರ, ಸಾವು
ರಿಪ್ಪನ್‌ಪೇಟೆ : ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೇರಿ ಗ್ರಾಮದ ಬಳಿ 30 ಅಡಿ ಆಳದ ಕಂದಕಕ್ಕೆ ಬೈಕ್ ಸಹಿತ ಸವಾರ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಹಾರೋಹಿತ್ತಲು ಗ್ರಾಮದ ಅಡ್ಡೇರಿ ನಿವಾಸಿ ಗೇರ್ ಗಲ್ ದೇವೇಂದ್ರಪ್ಪ (55) ಮೃತ ವ್ಯಕ್ತಿ. ಗುರುವಾರ ಸಂಜೆ ಡೈರಿಗೆ ಹಾಲು ಹಾಕಿ ಹಿಂದಿರುಗುವಾಗ ಘಟನೆ ನಡೆದಿದೆ.
Shivamogga Live
ಕೋಟಿ ಕೋಟಿ ವೆಚ್ಚೆದ ಕಾಮಗಾರಿಗಳಿಗೆ ಭೂಮಿ ಪೂಜೆ
ಸೊರಬ : ಇಲ್ಲಿನ ರಂಗಮಂದಿರದಲ್ಲಿ 39.26 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧು ಬಂಗಾರಪ್ಪ ಭೂಮಿ ಪೂಜೆ ನೆರವೇರಿಸಿದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮಗಳಿಗೂ ಸ್ವತಃ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡಲಾಗುವುದು. ಭೂಮಿ ಪೂಜೆ ನೆರವೇರಿಸಿದ ಎಲ್ಲ ಕಾಮಗಾರಿಗಳನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಲೇ ಪ್ರಾರಂಭಿಸಬೇಕು. ಜನವರಿಯಲ್ಲಿ 200 ಕೋಟಿ ರೂ. ವೆಚ್ಚದ 179 ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
– ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
Shivamogga Live
ಇದನ್ನೂ ಓದಿ » ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ, ಮಿನಿಸ್ಟರ್ ಏನೆಲ್ಲ ಹೇಳಿದರು?
ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ತೀರ್ಥಹಳ್ಳಿ : ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕು ಕಚೇರಿ ಮುಂಭಾಗ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಪಟ್ಟನ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಿಜೆಪಿ, ಆರ್‌ಎಸ್‌ಎಸ್ ಮುಖಂಡರು ಪ್ರತಿದಿನ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ, ಮೀಸಲಾತಿ ವಿರೋಧಿಸುವ ಬಿಜೆಪಿ ಮುಖಂಡರು ಶೋಷಿತ ಸಮುದಾಯಕ್ಕೆ ಅನ್ಯಾಯ ಮಾಡುವ ಧೋರಣೆ ಮುಂದುವರೆಸಿದ್ದಾರೆ.
– ಕಿಮ್ಮನೆ ರತ್ನಾಕರ್, ಮಾಜಿ ಸಚಿವ
Shivamogga Live
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳಗ್ಗೆ ಬಿಸಿಲ ಅಬ್ಬರ, ಸಂಜೆ ಚಳಿ, ಇವತ್ತು ಮೋಡ ಕವಿದ ವಾತಾವರಣ
ಗ್ಯಾರಂಟಿ ಯೋಜನೆ ಕಾರ್ಯಾಲಯ ಉದ್ಘಾಟನೆ
ಶಿಕಾರಿಪುರ : ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಕಾರ್ಯಾಲಯವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಭೂಪಾಲ್, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ ಸೇರಿ ಹಲವರು ಇದ್ದರು.
Shivamogga Live
ಧಗಧಗ ಹೊತ್ತಿ ಉರಿದ ಬಸ್ಸು
ಶಿವಮೊಗ್ಗ : ಮಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಸಕ್ರೆಬೈಲು ಬಳಿ ಘಟನೆ ಸಂಭವಿಸಿದ್ದು, ಚಾಲಕ ಕೂಡಲೆ ಬಸ್ ನಿಲ್ಲಸಿ ಎಲ್ಲಾ 18 ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಸ್ಸು ಬಹತೇಕ ಸುಟ್ಟು ಹೋಗಿದೆ.
Shivamogga Live
ಇದನ್ನೂ ಓದಿ » ಸಕ್ರೆಬೈಲು ಬಳಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ದೊಡ್ಡ ಅನಾಹುತ
ಗುತ್ತಿಗೆದಾರರಿಂದ ಅಹೋರಾತ್ರಿ ಧರಣಿ
ಶಿವಮೊಗ್ಗ : ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ (ಕೆಎಫ್‌ಡಿಸಿ) ತಪ್ಪು ಆದೇಶದಿಂದ ಅರಣ್ಯ ನೆಡುತೋಪು ಗುತ್ತಿಗೆದಾರರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ ರಾಜ್ಯ ಎಂಪಿಎಂ ಮತ್ತು ಕೆಎಫ್‌ಡಿಸಿ ಅರಣ್ಯ ನೆಡುತೋಪು ಗುತ್ತಿಗೆದಾರರ ಕ್ಷೇಮಾಭಿವೃದ್ದಿ ಟ್ರಸ್ಟ್ ವತಿಯಿಂದ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಗುರುವಾರ ಅಹೋರಾತ್ರಿ ಧರಣಿ ನಡೆಸಲಾಯಿತು.
Shivamogga Live
ಅರಣ್ಯದಲ್ಲಿ ಮರಳು ಸಾಗಾಟ, ಕೇಸ್
ಹೊಸನಗರ : ಮೀಸಲು ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ತಾಲೂಕಿನ ಪುಣಜೆ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಮರಳು ಸಾಗಾಟ ನಡೆಸಲಾಗುತ್ತಿತ್ತು. ಆರ್‌ಎಫ್‌ಒ ಅನಿಲ್ ಕುಮಾರ್, ಡಿಆರ್‌ಎಫ್‌ಒ ಅನಿಲ್ ಬೆಳ್ಳೆನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
Shivamogga Live
ಮೃತನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ
ಭದ್ರಾವತಿ : ರೈಸ್ ಮಿಲ್‌ನಲ್ಲಿ ಬಾಯ್ಲರ್ ಸ್ಪೋಟಗೊಂಡು ಬಾಯ್ಲರ್ ಆಪರೇಟರ್ ರಘುನಾಥ ರಾವ್ ಸಾಳಂಕೆ (46) ಸಾವನ್ನಪ್ಪಿದ್ದಾರೆ. ಶುಕ್ರವಾರ ಅವರ ಮೃತದೇಹ ಪತ್ತೆಯಾಗಿದೆ. ಅವರ ಕುಟುಂಬಕ್ಕೆ ರೈಸ್ ಮಿಲ್ ಮಾಲೀಕರ ಕಡೆಯಿಂದ 30 ಲಕ್ಷ ರೂ. ಪರಿಹಾರ ನೀಡಲಾಯಿತು. ಸುತ್ತಮುತ್ತಲ ವಿವಿಧ ಮನೆ, ಮಳಿಗೆಗಳಿಗು ಹಾನಿಯಾಗಿದೆ.
Shivamogga Live
ಡಿಎಸ್‌ಎಸ್ ಪ್ರತಿಭಟನೆ
ಶಿಕಾರಿಪುರ : ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಸತ್ತಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಡಿಎಸ್‌ಎಸ್ ಮುಖಂಡ ಚುರ್ಚಿಗುಂಡಿ ಜಗದೀಶ್, ಕೆಪಿಸಿಸಿ ಸದಸ್ಯ ಗೋಣಿ ಮಾಲ್ತೇಶ್, ಕೆಡಿಪಿ ಸದಸ್ಯ ರಾಘವೇಂದ್ರ ನಾಯಕ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
Shivamogga Live
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200