ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ 12‌ ಸುದ್ದಿಗಳು

ಶಿವಮೊಗ್ಗ: ಜಿಲ್ಲೆಯಲ್ಲಿ ಏನೇನಾಯ್ತು? ಇಲ್ಲಿದೆ ಪ್ರಮುಖ ಸುದ್ದಿಗಳ ಫಟಾಫಟ್‌ ಅಪ್‌ಡೇಟ್‌. (Morning News)

NEWS 1

ಲೋಪ ಕಂಡು ಬಂದರೆ ಕ್ರಮ

ಶಿವಮೊಗ್ಗ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅವರು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಜಿಲ್ಲೆಯ ಪಡಿತರ ವ್ಯವಸ್ಥೆ ಖಾತ್ರಿಪಡಿಸಲು ನಾಲ್ಕು ದಿನ ಜಿಲ್ಲಾ ಪ್ರವಾಸ ಕೈಗೊಳ್ಳಲಾಗಿದೆ. ಲೋಪದೋಷಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

GOOD-MORNING-SHIVAMOGGA-NEWS-UPDATE
NEWS 2

ಅಸಂಘಟಿತ ಕಾರ್ಮಿಕರಿಗೆ ಮಂಡಳಿ ರಚನೆಗೆ ಆಗ್ರಹ

ಶಿವಮೊಗ್ಗ: ಅಡಿಕೆ ಮತ್ತು ಕಾಫಿ ಬೆಳೆ ಉದ್ಯಮದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗಾಗಿ ಪ್ರತ್ಯೇಕ ಮಂಡಳಿ ರಚಿಸುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಂಡಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಭದ್ರತೆ ನೀಡಲು ಅಡಿಕೆ ಮತ್ತು ಕಾಫಿ ಬೆಳೆ ಮಾರಾಟದ ವಹಿವಾಟಿನ ಮೇಲೆ ಶೇ.1ರಷ್ಟು ಸೆಸ್‌ ವಿಧಿಸಿ, ಅಂಬೇಡ್ಕರ್ ಶ್ರಮಿಕರ ಭದ್ರತಾ ಮಂಡಳಿ ಸ್ಥಾಪಿಸಬೇಕೆಂದು ಮನವಿ ಸಲ್ಲಿಸಲಾಯಿತು.

NEWS 3

ಫಲಪುಷ್ಪ ಪ್ರದರ್ಶನ, ಕರಕುಶಲ ಉತ್ಸವ

ಶಿವಮೊಗ್ಗ: ಗಣರಾಜ್ಯೋತ್ಸವದ ಅಂಗವಾಗಿ ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ ಜನವರಿ 24 ರಿಂದ 27ರವರೆಗೆ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ ಮತ್ತು ಕರಕುಶಲ ಉತ್ಸವ ನಡೆಯಲಿದೆ. ಈ ಬಾರಿ 15 ಅಡಿ ಎತ್ತರದ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ ಹಾಗೂ 22 ಅಡಿ ಎತ್ತರದ ಜೋಗ ಜಲಪಾತದ ಹೂವಿನ ಕಲಾಕೃತಿಗಳು ವಿಶೇಷ ಆಕರ್ಷಣೆಯಾಗಿರಲಿವೆ.

NEWS 4

ನರೇಗಾ ಹೆಸರು ಬದಲಾವಣೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ: ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧೀಜಿಯವರ ಹೆಸರು ಕೈಬಿಟ್ಟು ಹೆಸರು ಬದಲಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗಾಂಧಿ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಇದು ಗ್ರಾಮ ಸ್ವರಾಜ್ಯದ ಆಶಯಕ್ಕೆ ವಿರುದ್ಧವಾದ ಮತ್ತು ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಬದಲಾವಣೆ ಎಂದು ಮುಖಂಡರು ದೂರಿದರು.

NEWS 5

ಇಸ್ಕಾನ್ ವತಿಯಿಂದ ಕೃಷ್ಣ ಬಲರಾಮ ರಥಯಾತ್ರೆ

ಶಿವಮೊಗ್ಗ: ಇಸ್ಕಾನ್ ಸಂಸ್ಥೆಯ ವತಿಯಿಂದ ಜನವರಿ 24ರಂದು ಶಿವಮೊಗ್ಗ ನಗರದಲ್ಲಿ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ ಪ್ರಮುಖ ರಸ್ತೆಗಳಲ್ಲಿ ರಥಯಾತ್ರೆ ಸಂಚರಿಸಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಹಾಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Total-Readers-of-Shivamogga-Live
NEWS 6

ಬಿಜೆಪಿ ಕಾರ್ಯಕರ್ತರ ಸಂಭ್ರಮ

ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬೀನ್‌ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನಲೆ ಶಿವಮೊಗ್ಗದ ಬಿಜೆಪಿ ಕಚೇರಿ ಮುಂಭಾಗ ಸಂಭ್ರಮಾಚರಣೆ ಮಾಡಲಾಯಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.

NEWS 7

ಡಿಸಿಸಿ ಬ್ಯಾಂಕ್‌ಗೆ ನುಗ್ಗಿದ ಜಿಂಕೆ

ಭದ್ರಾವತಿ: ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಗೆ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಂಕೆಯೊಂದು ನುಗ್ಗಿತ್ತು. ಗಾಬರಿಯಿಂದ ಬ್ಯಾಂಕಿನ ಗಾಜಿಗೆ ಗುದ್ದಿ ಜಿಂಕೆ ಕುಸಿದು ಬಿದ್ದಿತ್ತು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಜಿಂಕೆಯನ್ನು ರಕ್ಷಿಸಿ, ಸಮೀಪದ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

NEWS 8

ವೃದ್ಧ ದಂಪತಿಯ ನಿಗೂಢ ಸಾವು

ಭದ್ರಾವತಿ: ಭೂತನಗುಡಿ ಬಡಾವಣೆಯ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಚಂದ್ರಪ್ಪ ಮತ್ತು ಜಯಮ್ಮ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನಗರಸಭೆ ಸದಸ್ಯರು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮಕ್ಕಳು ಬೇರೆ ಊರುಗಳಲ್ಲಿ ವಾಸವಿದ್ದರು. ಹಳೇ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

NEWS 9

ಮಾರಿಕಾಂಬಾ ಜಾತ್ರೆ ಸಿದ್ಧತೆಗಳ ಪರಿಶೀಲನೆ

ಸಾಗರ: ಮಾರಿಕಾಂಬಾ ಜಾತ್ರೆ ಹಿನ್ನೆಲೆ ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರಿಗಳ ಸಭೆ ನಡೆಸಿದರು. ಜಾತ್ರೆಯ ಯಶಸ್ಸಿಗಾಗಿ 20 ಸಮಿತಿಗಳನ್ನು ರಚಿಸಲಾಗಿದ್ದು, ಭಕ್ತರ ಅನುಕೂಲಕ್ಕಾಗಿ ನಮ್ಮ ಕ್ಲಿನಿಕ್ ಘಟಕಗಳು, ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾ ಮತ್ತು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಪೊಲೀಸರ ಕಾರ್ಯಾಚರಣೆ, ಐದು ಬೈಕುಗಳು ವಶಕ್ಕೆ, ಕಾರಣವೇನು?

NEWS 10

ವೀರಾಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ

ಆನಂದಪುರ: ಬಸವನ ಬೀದಿಯ ಇತಿಹಾಸ ಪ್ರಸಿದ್ಧ ವೀರಾಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವವು ಸಂಭ್ರಮದಿಂದ ಜರುಗಿತು. ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ವಿವಿಧ ವಾದ್ಯಮೇಳಗಳೊಂದಿಗೆ ರಾಜಬೀದಿಗಳಲ್ಲಿ ರಥೋತ್ಸವ ಮೆರವಣಿಗೆ ಅದ್ಧೂರಿಯಾಗಿ ಸಾಗಿತು.

NEWS 11

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಸಾಗರ: ಸಾಗರ ಕ್ಷೇತ್ರದಲ್ಲಿ ಗಾಂಜಾ ಮಾರಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿದ್ದು, ಆಡಳಿತ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ಹಾಲಪ್ಪ, ರೈತರಿಗೆ ಬೆಳೆವಿಮೆ ಮತ್ತು ಸಮರ್ಪಕ ವಿದ್ಯುತ್ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್‌ ಠಾಣೆ ಸರ್ಕಲ್‌ವರೆಗೆ ಪ್ರತಿಭಟನೆ ನಡೆಸಲಾಯಿತು.

NEWS 12

ಬಸ್ ನಿಲ್ದಾಣಕ್ಕೆ ಸ್ಥಳ ನಿಗದಿ

ಹೊಳೆಹೊನ್ನೂರು: ಅರಹತೊಳಲು ಕೈಮರದ ಎನ್.ಡಿ. ಸುಂದರೇಶ್ ವೃತ್ತದಲ್ಲಿ ಬಸ್ ನಿಲ್ಲಿಸಲು ನಿರ್ದಿಷ್ಟ ಸ್ಥಳ ನಿಗದಿಪಡಿಸಲಾಗಿದೆ. ಈ ಹಿಂದೆ ಅನಧಿಕೃತ ಅಂಗಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈಗ ಪಂಚಾಯಿತಿ ಮತ್ತು ಪೊಲೀಸರ ಸಹಯೋಗದಲ್ಲಿ ಸ್ಥಳಾವಕಾಶ ಕಲ್ಪಿಸಿ, ವ್ಯವಸ್ಥಿತವಾಗಿ ಬಸ್ ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : January 21, 2026 at 9:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 21, 2026

Leave a Comment