ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿಗಳು

 ಶಿವಮೊಗ್ಗ  LIVE 

ಫಟಾಫಟ್‌ ನ್ಯೂಸ್‌: ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಪ್ರಮುಖ ಸುದ್ದಿಗಳು (top news).

ಕುಪ್ಪಳಿಯಲ್ಲಿ ಕುವೆಂಪು ಜನ್ಮದಿನೋತ್ಸವ

Speed News 1ತೀರ್ಥಹಳ್ಳಿ: ಕುಪ್ಪಳಿಯಲ್ಲಿ ನಡೆದ ಕುವೆಂಪು ಅವರ 121ನೇ ಜನ್ಮದಿನೋತ್ಸವದಲ್ಲಿ ಕೊಂಕಣಿ ಸಾಹಿತಿ ಮಹಾಬಲೇಶ್ವರ ಸೈಲ್‌ ಅವರಿಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಸಚಿವ ಮಧು ಬಂಗಾರಪ್ಪ ಅವರು ಕುವೆಂಪು ಪ್ರತಿಷ್ಠಾನಕ್ಕೆ ಸರ್ಕಾರದ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಇದೇ ವೇಳೆ ಶಾಸಕ ಆರಗ ಜ್ಞಾನೇಂದ್ರ ಮತ್ತು ಬಿ.ಎಲ್. ಶಂಕರ್ ಅವರು ಕುವೆಂಪು ಅವರ ವಿಶ್ವಮಾನವ ಸಂದೇಶದ ಪ್ರಸ್ತುತತೆಯನ್ನು ಸ್ಮರಿಸಿದರು.

ಸೊರಬದಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

Speed News 2ಸೊರಬ: ತಾಲೂಕು ಮಟ್ಟದ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಕವಿತಾ, ಕನ್ನಡ ಭಾಷೆಯ ಬೆಳವಣಿಗೆಗೆ ಶ್ರಮಿಸುವಂತೆ ಕರೆ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಹಾಗೂ ಪ್ರಶ್ನಿಸುವ ಗುಣ ಬೆಳೆಯಬೇಕು ಎಂದರು. ಪ್ರತಿಭೆಗಳ ಗುರುತಿಸುವಿಕೆಗೆ ಇಂತಹ ಸಮ್ಮೇಳನಗಳು ಅಗತ್ಯ ಎಂದು ಸಂಘಟಕರು ತಿಳಿಸಿದರು.

ಶರಾವತಿ ಪಂಪ್ಡ್‌ ಸ್ಟೋರೇಜ್‌, ಮನವಿ ಸಲ್ಲಿಕೆ

Speed News 3ಸಾಗರ: ಜೋಗ ಸಮೀಪ ಉದ್ದೇಶಿತ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದ ಕೇಂದ್ರ ವನ್ಯಜೀವಿ ಮಂಡಳಿ ತಂಡಕ್ಕೆ ಪರಿಸರವಾದಿಗಳು ಮನವಿ ಸಲ್ಲಿಸಿದರು. ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಅಖಿಲೇಶ್ ಚಿಪ್ಪಳಿ ಹಾಗೂ ನಿವೃತ್ತ ನ್ಯಾಯಾಧೀಶ ಸಿ.ಬಿ. ಮನೋಹರ ಕುಮಾರ್ ಅಹವಾಲು ಸಲ್ಲಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂ ವಿರೋಧಿ ವಿಧೇಯಕ

Speed News 4ಹೊಸನಗರ: ರಾಜ್ಯ ಸರ್ಕಾರದ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವು ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸಿ ಹೊಸನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಈ ಸಂದರ್ಭ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಲಪ್ಪ ಹರತಾಳು, ಕಾಂಗ್ರೆಸ್ ಸರ್ಕಾರ ಈ ವಿಧೇಯಕದ ಮೂಲಕ ತನ್ನ ಹಿಂದೂ ವಿರೋಧಿ ನಿಲುವು ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದರು. ವಿಧೇಯಕವನ್ನು ಕೂಡಲೇ ರದ್ದುಪಡಿಸುವಂತೆ ಅವರು ಒತ್ತಾಯಿಸಿದರು.

ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಯತ್ನ

Speed News 5ಶಿವಮೊಗ್ಗ: ರೈಲು ಪ್ರಯಾಣ ದರ ಹೆಚ್ಚಳ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಕೇಂದ್ರ ಸರ್ಕಾರ ಪದೇ ಪದೆ ದರ ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಮುಖಂಡರಾದ ಚೇತನ್‌ಗೌಡ ಮತ್ತು ಎಚ್.ಸಿ. ಯೋಗೇಶ್ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ದರ ಏರಿಕೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ವಿಐಎಸ್‌ಎಲ್, ನಿವೃತ್ತ ನೌಕರರಿಂದ ಮತದಾನ

Speed News 6ಭದ್ರಾವತಿ: ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ 15 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಒಟ್ಟು 32 ಅಭ್ಯರ್ಥಿಗಳು ಕಣದಲ್ಲಿದ್ದು, ಸಿಲ್ವರ್ ಜ್ಯೂಬಿಲಿ ಕಾಲೇಜಿನಲ್ಲಿ ಮತದಾನ ಪ್ರಕ್ರಿಯೆ ಜರುಗಿತು. ಒಟ್ಟು 2,909 ಮತದಾರರ ಪೈಕಿ 987 ಮಂದಿ ತಮ್ಮ ಹಕ್ಕು ಚಲಾಯಿಸಿದರು.

ಇದನ್ನೂ ಓದಿ » ಇವತ್ತು ವೈಕುಂಠ ಏಕಾದಶಿ, ಶುಭ ಸಮಯ ಯಾವಾಗಿದೆ? – ಇಂದಿನ ಪಂಚಾಂಗಕ್ಕೆ ಕ್ಲಿಕ್‌ ಮಾಡಿ

ಚಿರತೆ ಪ್ರತ್ಯಕ್ಷ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Speed News 7ರಿಪ್ಪನ್‌ಪೇಟೆ: ಸಮೀಪದ ಅರಸಾಳು ಗ್ರಾಮದ ಕೊಳವಂಕದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾಕುನಾಯಿಯ ಮೇಲೆ ದಾಳಿಗೆ ಯತ್ನಿಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಭಾನುವಾರ ಮುಂಜಾನೆ ವಾಸುದೇವ ಎಂಬುವವರ ಮನೆಯಂಗಳಕ್ಕೆ ಚಿರತೆ ನುಗ್ಗಿತ್ತು. ಇದರಿಂದ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆಯು ಚಿರತೆಯನ್ನು ಹಿಡಿದು ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೊಸ ವರ್ಷಾಚರಣೆ, ಎಸ್‌.ಪಿ ಎಚ್ಚರಿಕೆ

Speed News 8ಶಿವಮೊಗ್ಗ: ಹೊಸ ವರ್ಷಾಚರಣೆ ವೇಳೆ ಮಾದಕ ವಸ್ತುಗಳ ಬಳಕೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಎಚ್ಚರಿಸಿದ್ದಾರೆ. ಸಂಭ್ರಮಾಚರಣೆ ರಾತ್ರಿ 1 ಗಂಟೆಯೊಳಗೆ ಮುಕ್ತಾಯವಾಗಬೇಕು ಹಾಗೂ ಮದ್ಯಪಾನ ಮಾಡಿದವರಿಗೆ ಆಯೋಜಕರೇ ವಾಹನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ. ಸಾರ್ವಜನಿಕ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಕೆ ಮತ್ತು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲು ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರಿಗೆ ಸಭೆಯಲ್ಲಿ ನಿರ್ದೇಶನ ನೀಡಿದರು.

ಇದನ್ನೂ ಓದಿ » ವಿನೋಬನಗರ ತರಕಾರಿ ಮಂಡಿ ಮುಂದೆ ಕೊಲೆ, ಕಾರಣವೇನು? ಸ್ಥಳದಲ್ಲಿ ಪರಿಸ್ಥಿತಿ ಹೇಗಿದೆ?

ತೀರ್ಥಹಳ್ಳಿ, ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ

Speed News 9ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರತ್ನಾಕರ ಶೆಟ್ಟಿ ಅಧಿಕಾರ ಸ್ವೀಕಾರಿಸಿದರು. ಇದೇ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪಕ್ಷಕ್ಕೆ ದ್ರೋಹ ಎಸಗಿದ ಸದಸ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಸಂದರ್ಭ ತಾವು ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಸೂಚಿಸಿದ ಅವರು, ಕ್ಷಮೆ ಕೋರದಿದ್ದರೆ ಅಂತಹ ಸದಸ್ಯರನ್ನು ಪಕ್ಷದಿಂದ ಶಾಶ್ವತವಾಗಿ ಉಚ್ಚಾಟಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು. ಅಧ್ಯಕ್ಷರ ಆಯ್ಕೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಹಿಂದೆ ಇರುವ ಕೈವಾಡಗಳನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ತಿಳಿಸಿದರು.

ಸಾಮಾಜಿಕ ಬಹಿಷ್ಕಾರ, ಶಿವಮೊಗ್ಗದಲ್ಲಿ ಮೆರವಣಿಗೆ

Speed News 10ಶಿವಮೊಗ್ಗ: ಸೊರಬ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಅನಿಷ್ಠ ಸಾಮಾಜಿಕ ಬಹಿಷ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ನೇತೃತ್ವದಲ್ಲಿ ನೊಂದ ಕುಟುಂಬಗಳು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದವು. ಬಹಿಷ್ಕಾರದಿಂದಾಗಿ ಮಕ್ಕಳು ಮತ್ತು ಕುಟುಂಬಗಳು ಶೋಚನೀಯ ಬದುಕು ನಡೆಸುತ್ತಿವೆ. ಈ ಕುರಿತು ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. 15 ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment