ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿಗಳು

 ಶಿವಮೊಗ್ಗ  LIVE 

ಫಟಾಫಟ್‌ ನ್ಯೂಸ್‌: ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಪ್ರಮುಖ ಸುದ್ದಿಗಳು (top news).

ಸಾಲ ನೀಡುವಾಗ, ವಸೂಲಿ ಮಾಡುವಾಗ ಎಚ್ಚರ

Speed News 1ಶಿವಮೊಗ್ಗ: ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ವಿಶೇಷ ತರಬೇತಿ ಶಿಬಿರ ನಡೆಯಿತು. ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಶಿಬಿರ ಉದ್ಘಾಟಿಸಿ, ಸಾಲ ನೀಡುವಾಗ ಮತ್ತು ವಸೂಲಿ ಮಾಡುವಾಗ ಆಡಳಿತ ಮಂಡಳಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ನೀರಾವರಿ ಸಲಹಾ ಸಮಿತಿ ಸಭೆ

Speed News 2ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಹಂಗಾಮಿಗೆ ನೀರು ಹರಿಸುವ ಕುರಿತು ತೀರ್ಮಾನಿಸಲು ಜನವರಿ 2ರಂದು ಬೆಳಿಗ್ಗೆ 9ಕ್ಕೆ ಕಾಡಾ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ.

ಕಾಯ್ದೆ ಜಾರಿಗೆ ತರುವಂತೆ ಆಗ್ರಹ

Speed News 3ಶಿವಮೊಗ್ಗ: ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಹುಬ್ಬಳ್ಳಿ ತಾಲ್ಲೂಕಿನಲ್ಲಿ ನಡೆದ ಯುವತಿಯ ಹತ್ಯೆ ಪ್ರಕರಣವನ್ನು ಖಂಡಿಸಿ, ಇಂತಹ ಅಮಾನವೀಯ ಕೃತ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಲಾಯಿತು.

ಶಾಲೆ ವಾರ್ಷಿಕೋತ್ಸವದಲ್ಲಿ ಕಾಗಿನೆಲೆ ಶ್ರೀ

Speed News 4ಶಿಕಾರಿಪುರ: ಶಿಕ್ಷಣದಿಂದ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಬಂಧನಗಳಿಂದ ವಿಮೋಚನೆ ಸಾಧ್ಯ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಗಿದ್ದೇಶ್ವರ ವಸತಿ ಶಾಲೆಯ ವಾರ್ಷಿಕೋತ್ಸವದಲ್ಲಿ ಅವರು ಸಾನಿಧ್ಯ ವಹಿಸಿದ್ದರು. ಶಾಸಕ ಬಿ.ಯೈ. ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು.

‘ಪಡಿತರ ವಿತರಣೆಗೆ ಅವಕಾಶ ನೀಡಬೇಕುʼ

Speed News 5ತುಮರಿ: ಹೊಸದಾಗಿ ಆರಂಭವಾಗಿರುವ ಹೊಸಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಅವಕಾಶ ನೀಡಬೇಕೆಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಂಘದ ಸದಸ್ಯರು ಮನವಿ ಸಲ್ಲಿಸಿದರು. ದೂರದ ಊರುಗಳಿಗೆ ಪಡಿತರಕ್ಕಾಗಿ ಅಲೆಯುತ್ತಿರುವ ಜನರ ಅನಾನುಕೂಲವನ್ನು ತಪ್ಪಿಸಲು ಈ ಮನವಿ ಮಾಡಲಾಗಿದೆ.

ರೈತರಿಗೆ ವಂಚಿಸಿದರೆ ಕಪ್ಪು ಪಟ್ಟಿಗೆ

Speed News 6ಸಾಗರ: ‘ಬೆಳೆ ವಿಮೆ ಕಂಪನಿಗಳು ರೈತರನ್ನು ವಂಚಿಸುತ್ತಿವೆ. ಅಂತಹ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆʼ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಕಂಪನಿಗಳು ತಪ್ಪು ಮಾಹಿತಿ ನೀಡಿ ರೈತರಿಗೆ ಪರಿಹಾರ ನೀಡಲು ಹಿಂದೇಟು ಹಾಕುತ್ತಿವೆ ಎಂದು ದೂರಿದರು.

ಹುಲಿಕಲ್‌ ಘಾಟಿಯಲ್ಲಿ ಬಸ್‌ ಡಿಕ್ಕಿ, ಮಗು ಸಾವು

Speed News 7ಹೊಸನಗರ: ದಾವಣಗೆರೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಹುಲಿಕಲ್ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಎರಡು ವರ್ಷದ ರಿಷನಾ ಫಾತೀಮಾ ಎಂಬ ಮಗು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಫಾರ್ಮಸಿ ಕಾಲೇಜು ಪದವಿ ಪ್ರಮಾಣ ಪತ್ರ ವಿತರಣೆ

Speed News 8ಶಿವಮೊಗ್ಗ: ‘ನ್ಯಾನೊ ಮತ್ತು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳಿಂದ ಜಗತ್ತಿನಲ್ಲಿ ವೇಗದ ಬದಲಾವಣೆಗಳಾಗುತ್ತಿವೆ’ ಎಂದು ವಿಜ್ಞಾನಿ ಎಸ್.ಎಂ. ಶಿವಪ್ರಸಾದ್ ತಿಳಿಸಿದರು. ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದನ್ನೂ ಓದಿ » ಶಿವಮೊಗ್ಗದ 120 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, ವಿಜ್ಞಾನಿಯಿಂದ ಪ್ರಮುಖ ಸಲಹೆ, ಏನೇನೆಲ್ಲ ಹೇಳಿದರು?

ಕೇಕ್‌ ತಯಾರಿಕಾ ಘಟಕಗಳ ಮೇಲೆ ದಾಳಿ

Speed News 9ಶಿವಮೊಗ್ಗ: ರವೀಂದ್ರನಗರದಲ್ಲಿರುವ ಕೇಕ್ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಗುಣಮಟ್ಟದ ಲೋಪಗಳ ಬಗ್ಗೆ ಬಂದ ದೂರಿನ ಮೇರೆಗೆ ತಪಾಸಣೆ ನಡೆಸಿ, ಕಂಡುಬಂದ ನ್ಯೂನತೆಗಳಿಗಾಗಿ ಮಾಲೀಕರಿಗೆ ನೋಟಿಸ್ ನೀಡಲಾಯಿತು. ಉಪ ವಿಭಾಗಾಧಿಕಾರಿ ಸತ್ಯನಾರಾಯಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಇದನ್ನೂ ಓದಿ » ಹೊಸ ವರ್ಷಾಚರಣೆ ಮುನ್ನ ಶಿವಮೊಗ್ಗದ ಕೇಕ್‌ ತಯಾರಿಕಾ ಘಟಕಗಳ ಮೇಲೆ ದಾಳಿ, ಏನೇನೆಲ್ಲ ಸಿಕ್ತು?

ಆಹಾರ ಇಲಾಖೆ ಕಚೇರಿ ಸ್ಥಳಾಂತರಕ್ಕೆ ಮನವಿ

Speed News 10ಶಿವಮೊಗ್ಗ: ಗೋಪಾಳದಲ್ಲಿರುವ ಆಹಾರ ಇಲಾಖೆ ಕಚೇರಿಯನ್ನು ವಿನೋಬನಗರದ ಸೂಡಾ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಶಾಂತವೇರಿ ಗೋಪಾಲಗೌಡ ಟ್ರಸ್ಟ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ದೂರದ ಕಚೇರಿಗೆ ಹೋಗಲು ಬಡವರು ಮತ್ತು ಹಿರಿಯ ನಾಗರಿಕರು ಅನುಭವಿಸುತ್ತಿರುವ ಕಷ್ಟವನ್ನು ತಪ್ಪಿಸಲು ಈ ಒತ್ತಾಯ ಮಾಡಲಾಗಿದೆ.

ಚಿರತೆ ದಾಳಿ, ನಾಯಿ ಸಾವು

Speed News 11ಭದ್ರಾವತಿ: ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಚಿರತೆಯೊಂದು ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಕೊಂದಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಚಿರತೆಯ ದಾಳಿ ದೃಢಪಟ್ಟಿದ್ದು, ಅರಣ್ಯ ಇಲಾಖೆ ಸ್ಥಳದಲ್ಲಿ ಬೋನ್ ಇರಿಸಲು ನಿರ್ಧರಿಸಿದೆ.

‘ಕಾಯ್ದೆಯಿಂದ ಶಾಂತಿ ನೆಲಸಲಿದೆ’

Speed News 12ಶಿವಮೊಗ್ಗ: ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಜಾರಿಯಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೀಶ್ ತಿಳಿಸಿದರು. ಈ ಕಾಯ್ದೆಯನ್ನು ವಿರೋಧಿಸುತ್ತಿರುವ ಬಿಜೆಪಿಯ ನಿಲುವು ಸರಿಯಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಾಲಿಕೆ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

Speed News 13ಶಿವಮೊಗ್ಗ: ಮಹಾನಗರ ಪಾಲಿಕೆ ನಿರ್ಮಿಸಿರುವ ಮಳಿಗೆಗಳನ್ನು ತಕ್ಷಣ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ರಾಷ್ಟ್ರಭಕ್ತರ ಬಳಗದ ಕೆ.ಈ. ಕಾಂತೇಶ್ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಜನವರಿ 3ರಂದು ಪಾಲಿಕೆ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಎರಡು ತಿಂಗಳಲ್ಲಿ ಲಕ್ಷ ಲಕ್ಷದ ಗಾಂಜಾ ವಶಕ್ಕೆ

Speed News 14ಶಿವಮೊಗ್ಗ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 177 ಪ್ರಕರಣಗಳನ್ನು ದಾಖಲಿಸಿದ್ದಾರೆ. ಸುಮಾರು 9 ಲಕ್ಷಕ್ಕೂ ಹೆಚ್ಚು ಮೌಲ್ಯದ ಗಾಂಜಾ ಮತ್ತು ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಡಾನೆ ದಾಳಿ, ಬೆಳೆ ನಷ್ಟ

Speed News 15ಆನಂದಪುರ: ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿದರು. ಸಂತ್ರಸ್ತ ರೈತರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment