SHIVAMOGGA LIVE NEWS | 28 JUNE 2024
BHADRAVATHI / HAVERI : ಮನೆ ದೇವರ (temple) ದರ್ಶನ ಮಾಡಿ, ಹೊಸ ವಾಹನದ ಪೂಜೆ ಮುಗಿಸಿ ಊರಿಗೆ ಮರಳುವ ಹೊತ್ತಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 13 ಮಂದಿ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡಿರುವ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸ ಟಿಟಿಗೆ ಮನೆ ದೇವರಿಂದ ಪೂಜೆ
ಭದ್ರಾವತಿ ತಾಲೂಕು ಎಮ್ಮೆಹಟ್ಟಿಯ ಆದರ್ಶ, ಚಾಲಕ ವೃತ್ತಿ ಮಾಡುತ್ತಿದ್ದರು. ಈಚೆಗೆ ಟಿಟಿ ವಾಹನ ಖರೀದಿ ಮಾಡಿದ್ದರು. ಈ ಹಿನ್ನೆಲೆ ಕುಟುಂಬದವರ ಜೊತೆಗೆ ಮನೆ ದೇವರು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಟಿಟಿ ವಾಹನಕ್ಕೆ ಪೂಜೆ ಸಲ್ಲಿಸಿ, ಬಳಿಕ ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದರು. ಇವತ್ತು ಬೆಳಗ್ಗೆ ಎಮ್ಮೆಹಟ್ಟಿ ಗ್ರಾಮಕ್ಕೆ ಮರಳಬೇಕಿತ್ತು. ಆದರೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿಯಾಗಿ 13 ಮಂದಿ ಸಾವನ್ನಪ್ಪಿದ್ದಾರೆ.
ಒಂದೇ ಕುಟುಂಬ, ಒಂದೇ ಗ್ರಾಮ
ಅಪಘಾತದಲ್ಲಿ ಮೃತಪಟ್ಟವರೆಲ್ಲ ಒಂದೇ ಕುಟುಂಬದವರು. ಟಿಟಿ ಚಾಲಕ ಆದರ್ಶ ಅವರ ತಂದೆ, ತಾಯಿ ಮತ್ತು ಸಂಬಂಧಿಕರು ಜೊತೆಗೆ ಪ್ರವಾಸಕ್ಕೆ ತೆರಳಿದ್ದರು. ಮೃತರನ್ನು ಆದರ್ಶ (23), ಪರಶುರಾಮ್ (45), ಭಾಗ್ಯ (40), ನಾಗೇಶ್ (50), ವಿಶಾಲಾಕ್ಷಿ (50), ಸುಭದ್ರಾ ಭಾಯಿ (65), ಪುಣ್ಯಾ ಬಾಯಿ (50), ಮಂಜುಳಾ ಬಾಯಿ (57), ಮಾನಸಾ (24), ರೂಪಾ (40), ಮಂಜುಳಾ (50), 4 ವರ್ಷದ ಮಗು ಮತ್ತು 6 ವರ್ಷದ ಮಗು ಮೃತರು ಎಂದು ಗುರುತಿಸಲಾಗಿದೆ.
ಎಮ್ಮೆಹಟ್ಟಿ ಗ್ರಾಮದಲ್ಲಿ ದಿಗ್ಭ್ರಮೆ, ಸ್ಥಳಕ್ಕೆ ದೌಡು
ಹಾವೇರಿಯಲ್ಲಿ ಟಿಟಿ ವಾಹನ ಅಪಘಾತಕ್ಕೀಡಾದ ವಿಷಯ ತಿಳಿಯುತ್ತಿದ್ದಂತೆ ಹೊಳೆಹೊನ್ನೂರು ಠಾಣೆ ಪೊಲೀಸರು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಪ್ರವಾಸಕ್ಕೆ ತೆರಳಿದ್ದವರ ಕುರಿತು ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು. ವಿಚಾರ ತಿಳಿದು ಗ್ರಾಮಸ್ಥರಲ್ಲಿ ದಿಗ್ಭ್ರಮೆ ಉಂಟಾಗಿದೆ. ಗ್ರಾಮದ ಪ್ರಮುಖು, ಮೃತರ ಸಂಬಂಧಿಗಳು, ಸ್ನೇಹಿತರು ಕೂಡಲೆ ಹಾವೇರಿಗೆ ತೆರಳಿದ್ದಾರೆ. ಸದ್ಯ ಎಮ್ಮಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಹಾವೇರಿ ರಕ್ಷಣಾಧಿಕಾರಿ ಏನಂದ್ರು?
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಾವೇರಿ ಜಿಲ್ಲಾ ರಕ್ಷಣಾಧಿಕಾರಿ ಅಂಶುಕುಮಾರ್, ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಲಾಗಿತ್ತು. ಹಿಂಬದಿಯಿಂದ ಟಿಟಿ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಪೈಕಿ ಇಬ್ಬರು ಪುರುಷರು, ಇಬ್ಬರು ಮಕ್ಕಳು, ಉಳಿದವರೆಲ್ಲ ಮಹಿಳೆಯರು. ಆಸ್ಪತ್ರೆಯಲ್ಲಿ ಒಬ್ಬ ವೃದ್ಧೆ ಮತ್ತು ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿದೆ. ಟಿಟಿ ವಾಹನ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ – ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಡಿಕ್ಕಿ, ಶಿವಮೊಗ್ಗ ಮೂಲದ 13 ಮಂದಿ ಸಾವು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200