ಶಿವಮೊಗ್ಗ ಲೈವ್.ಕಾಂ | ಬೆಂಗಳೂರು
ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು 89ನೇ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ಏನೆಲ್ಲ ಚರ್ಚೆಯಾಯ್ತು?
ಸಭೆಯಲ್ಲಿ ಜಲಾಶಯದ ಪ್ರಸ್ತುತ ನೀರಿನ ಸ್ಥಿತಿಗತಿ, ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ ಬೆಳೆಗಳ ವಿವರ ಹಾಗೂ ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ ಸಚಿವರು, ಶಾಸಕರು ಹಾಗೂ ರೈತ ಮುಖಂಡರ ಅಭಿಪ್ರಾಯ ಪಡೆಯಲಾಯಿತು. ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಶೀಘ್ರ ಚರ್ಚಿಸಿ ತೀರ್ಮಾನಕ್ಕೆ ಬರಲು ನಿರ್ಧರಿಸಲಾಯಿತು.
ಕುಡಿಯುವ ನೀರಿಗೆ ಮೊದಲ ಆದ್ಯತೆ
ಸಭೆಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಎಲ್ಲರ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ. ಆದರೆ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಇದು ಸರ್ಕಾರದ ಮೊದಲ ಆದ್ಯತೆ. ಜಿಲ್ಲಾಧಿಕಾರಿಗಳಿಂದ ಸರಿಯಾದ ಅಂಕಿ-ಅಂಶಗಳನ್ನು ಪಡೆದು, ಅವುಗಳ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮುಜರಾಯಿ ಇಲಾಖೆಯ ಸಚಿವ ಕೆ.ಎಸ್.ಬಸವಂತಪ್ಪ, ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಶಾಸಕರಾದ ಬಿ.ಕೆ.ಸಂಗಮೇಶ್ವರ, ಜಿ.ಹೆಚ್.ಶ್ರೀನಿವಾಸ, ಶಾರದ ಪೂರ್ಯಾನಾಯ್ಕ್, ಬಿ.ಪಿ.ಹರೀಶ್, ಸಮರ್ಥ್ ಶಾಮನೂರು, ಡಿ.ಜಿ.ಶಾಂತನಗೌಡ, ಲತಾ ಮಲ್ಲಿಕಾರ್ಜುನ, ಗಾಯತ್ರಿ ಶಾಂತೇಗೌಡ ಹಾಗೂ ರೈತ ಮುಖಂಡರಾಧ ಕೆ.ಟಿ.ಗಂಗಾಧರಪ್ಪ, ಹೆಚ್.ಆರ್.ಬಸವರಾಜಪ್ಪ, ತೇಜಸ್ವಿ ವಿ.ಪಟೇಲ್, ದ್ಯಾವಪ್ಪರೆಡ್ಡಿ, ಹೆಚ್.ಆರ್.ಲಿಂಗರಾಜ್, ಎಂ.ತಿಪ್ಪೇರುದ್ರಪ್ಪ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.