ಶಿವಮೊಗ್ಗ: ಪ್ರಶ್ನೆ ಪತ್ರಿಕೆಯಲ್ಲಿನ ಗೊಂದಲದಿಂದಾಗಿ ಕುವೆಂಪು ವಿಶ್ವವಿದ್ಯಾಲಯದ ಬಿ.ಎ. ಕನ್ನಡ ಐಚ್ಛಿಕ ಪರೀಕ್ಷೆ (Examination) ದಿಢೀರ್ ರದ್ದಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ಹಿಂಪಡೆದು ಕಳುಹಿಸಲಾಗಿದೆ.
ಬಿ.ಎ. 6ನೇ ಸೆಮಿಸ್ಟರ್ ಐಚ್ಛಿಕ ಕನ್ನಡ ಪರೀಕ್ಷೆ (ಪ್ರಶ್ನೆ ಪತ್ರಿಕೆ ಸಂಖ್ಯೆ 30632) ಇವತ್ತು ನಿಗದಿಯಾಗಿತ್ತು. ಆದರೆ ಪ್ರಶ್ನೆ ಪತ್ರಿಕೆ ಬದಲಾದ ಹಿನ್ನೆಲೆ ಗೊಂದಲ ಉಂಟಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಲಕೋಟೆ ತೆರೆದಾಗ ಪ್ರಶ್ನೆ ಪತ್ರಿಕೆಯಲ್ಲಿನ ಸಮಸ್ಯೆ ಗೊತ್ತಾಗಿದೆ.
ಆತಂಕ, ಗೊಂದಲದಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು
ಬೆಳಗ್ಗೆ 9 ಗಂಟೆಯಿಂದ ಇವತ್ತು ಐಚ್ಛಿಕ ವಿಷಯಗಳ ಪರೀಕ್ಷೆ ನಿಗದಿಯಾಗಿತ್ತು. ಐಚ್ಛಿಕ ಕನ್ನಡ ವಿಷಯ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಲಕೋಟೆ ತೆರೆದಾಗ ಶಿರೋನಾಮ ಸರಿ ಇತ್ತು. ಆದರೆ ಪ್ರಶ್ನೆಗಳು ಬದಲಾಗಿದ್ದವು. ಇವತ್ತು ಪ್ರಶ್ನೆ ಪತ್ರಿಕೆ 14ರ ಪರೀಕ್ಷೆ ನಡೆಯಬೇಕಿತ್ತು. ಆದರೆ ಈ ಪ್ರಶ್ನೆ ಪತ್ರಿಕೆಯಲ್ಲಿ ಈಗಾಗಲೇ ಪರೀಕ್ಷೆ ನಡೆದಿರುವ ಪ್ರಶ್ನೆ ಪತ್ರಿಕೆ 12ರ ಪ್ರಶ್ನೆಗಳು ಇದ್ದವು ಎಂದು ತಿಳಿದು ಬಂದಿದೆ.
ಇನ್ನು, ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಬೆಳಗ್ಗೆ ಉತ್ತರ ಪತ್ರಿಕೆ ನೀಡಲಾಗಿತ್ತು. ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಸೇರಿದಂತೆ ಅಗತ್ಯ ಮಾಹಿತಿ ಬರೆದಿದ್ದರು. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ ಉಂಟಾಗಿದೆ ಎಂಬ ವಿಷಯ ತಿಳಿದು ಆತಂಕಗೊಂಡರು. ಇತ್ತ ಪರೀಕ್ಷೆ ರದ್ದುಪಡಿಸಬೇಕೆ, ಬೇರೆ ಪ್ರಶ್ನೆ ಪತ್ರಿಕೆ ಬರುತ್ತದೆಯೇ ಎಂಬುದು ಗೊತ್ತಾಗದೆ ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿಗಳು ಗೊಂದಲಕ್ಕೀಡಾಗಿದ್ದವು.
ಪರೀಕ್ಷೆ ಮುಂದೂಡಿಕೆ ಮಾಹಿತಿ
ಇನ್ನೊಂದೆಡೆ ಸಮಸ್ಯೆಯ ಮಾಹಿತಿ ತಿಳಿಯುತ್ತಿದ್ದಂತೆ ಕುವೆಂಪು ವಿಶ್ವವಿದ್ಯಾಲಯ ಪರೀಕ್ಷೆಯನ್ನು ಮುಂದೂಡಿದೆ. ಎಲ್ಲ ಕಾಲೇಜುಗಳಿಗೆ ವಾಟ್ಸಪ್ ಮೂಲಕ ಮಾಹಿತಿ ರವಾನಿಸಲಾಗಿದೆ. ‘ತಾಂತ್ರಿಕ ಕಾರಣದಿಂದಾಗಿ ಇಂದು ನಿಗದಿಯಾಗಿದ್ದ ಐಚ್ಛಿಕ ಕನ್ನಡ ವಿಷಯದ (ಪ್ರಶ್ನೆ ಪತ್ರಿಕೆ ಸಂಖ್ಯೆ 30632) ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ. ವಿದ್ಯಾರ್ಥಿಗಳಿಂದ ಪ್ರಶ್ನೆ ಮತ್ತು ಉತ್ತರ ಪತ್ರಿಕೆ ಹಿಂಪಡೆಯುವಂತೆ’ ತಿಳಿಸಲಾಗಿದೆ.
ಇದನ್ನೂ ಓದಿ » ಗಾಜನೂರಿನ ತುಂಗಾ ಡ್ಯಾಮ್‌ನಿಂದ ಯಾವುದೇ ಸಂದರ್ಭ ನೀರು ಹೊರಕ್ಕೆ ಬಿಡುವ ಸಾಧ್ಯತೆ

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200