ಬೆಳೆ ವಿಮೆ ತಾರತಮ್ಯ, ಹೋರಾಟಕ್ಕೆ ದಿನಾಂಕ ಪ್ರಕಟ, ಸಮಿತಿ ಅಧ್ಯಕ್ಷರು ಏನಂದ್ರು? ಇಲ್ಲಿದೆ ಪಾಯಿಂಟ್ಸ್

ಶಿವಮೊಗ್ಗ: ಮಲೆನಾಡಿನ ರೈತರಿಗೆ ಕಳೆದ ಎರಡು ವರ್ಷಗಳಿಂದ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ನ್ಯಾಯಯುತ ಪರಿಹಾರ ದೊರೆಯುವವರೆಗೆ ನವೆಂಬರ್ 19 ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಶೋಧಾ ಬೆಳೆವಿಮೆ ಹೋರಾಟ ಸಮಿತಿ ಅಧ್ಯಕ್ಷ ಪುರುಷೋತ್ತಮ ಬೆಳ್ಳಕ್ಕ ತಿಳಿಸಿದರು. (ಈ ಸುದ್ದಿಯನ್ನು ಇನ್ನು 80 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ಸಂಗತಿಗಳನ್ನು ತಿಳಿಸಿದರು. ಇಲ್ಲಿದೆ‍ ಪಾಯಿಂಟ್ಸ್.‌

ಪಾಯಿಂಟ್‌ 1: 2024–25 ಮತ್ತು 2025–26ನೇ ಸಾಲಿನಲ್ಲಿ ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿವೃಷ್ಟಿಯಾಗಿದ್ದರೂ ವಿಮೆ ಪಾವತಿಸಿದ ರೈತರಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಮಳೆಯ ಅಂಕಿ ಅಂಶಗಳಲ್ಲಿನ ಲೋಪ ಹಾಗೂ ಅವೈಜ್ಞಾನಿಕ ನಿರ್ವಹಣೆಯಿಂದ ನೈಜ ಬೆಳೆ ನಷ್ಟ ಅನುಭವಿಸಿದ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ.

ಪಾಯಿಂಟ್‌ 2: ನಗರ ಹೋಬಳಿಯ ಕರಿಮನೆ ಪಂಚಾಯಿತಿಯಲ್ಲಿ ಅಡಿಕೆ ಬೆಳೆಗೆ ಹೆಕ್ಟೇರ್‌ಗೆ ₹67,750 ಪರಿಹಾರ ನೀಡಿದ್ದಾರೆ. ಪಕ್ಕದ ಮೂಡುಗುಪ್ಪದಲ್ಲಿ ₹3,450 ಹಾಗೂ ನಿಟ್ಟೂರಿನಲ್ಲಿ ಕೇವಲ ₹1,550 ನೀಡಲಾಗಿದೆ. ಇಂತಹ ತಾರತಮ್ಯದಿಂದ ರೈತರಿಗೆ ತೀವ್ರ ಅನ್ಯಾಯವಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಪಾಯಿಂಟ್‌ 3: ನಿಟ್ಟೂರು, ನಗರ ಹಾಗೂ ಚನ್ನಗೊಂಡ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಷಿಕ 6ರಿಂದ 7 ಸಾವಿರ ಮಿ.ಮೀ. ಮಳೆಯಾಗುತ್ತದೆ. ಎಲೆಚುಕ್ಕಿ ಮತ್ತು ಕೊಳೆ ರೋಗದಿಂದ ಅಡಿಕೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಬೆಳೆ ವಿಮೆಯೂ ಸರಿಯಾಗಿ ದೊರೆಯದಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.

ಪಾಯಿಂಟ್‌ 4: ಕಳೆದ ಎರಡು ವರ್ಷಗಳ ಬಾಕಿ ಬೆಳೆ ವಿಮೆ ಪರಿಹಾರವನ್ನು ತಕ್ಷಣ ಪಾವತಿಸಬೇಕು. ಹೋಬಳಿವಾರು ಪ್ರತ್ಯೇಕ ಟರ್ಮ್‌ಶೀಟ್ ರೂಪಿಸಿ, ಪಂಚಾಯಿತಿವಾರು ಮಳೆಯ ಅಂಕಿ ಅಂಶಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಹೋಬಳಿ ವ್ಯಾಪ್ತಿಯಲ್ಲಿ ಬ್ಯಾಕಪ್ ಹವಾಮಾನ ಕೇಂದ್ರ ಸ್ಥಾಪಿಸಬೇಕು.

ಮಳೆಮಾಪನ ಕೇಂದ್ರಗಳಲ್ಲಿನ ದೋಷದಿಂದ ಹೆಚ್ಚಿನ ಮಳೆಯಾದ ಪ್ರದೇಶಗಳ ರೈತರಿಗೆ ಕಡಿಮೆ ಬೆಳೆ ವಿಮೆ ಪರಿಹಾರ ದೊರೆಯುತ್ತಿದೆ. ಹೀಗಾಗಿ ಮಳೆಮಾಪನ ಕೇಂದ್ರಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಬೇಕು.

– ಕೆ.ವಿ. ಕೃಷ್ಣಮೂರ್ತಿ, ಮ್ಯಾಮ್‌ಕೋಸ್ ನಿರ್ದೇಶಕ

ಸುದ್ದಿಗೋಷ್ಠಿಯಲ್ಲಿ ಬೆಳೆ ವಿಮೆ ಹೋರಾಟ ಸಮಿತಿ ಅಧ್ಯಕ್ಷ ರಾಮಚಂದ್ರ ಹಾಬಿಗೆ ಹಾಗೂ ದೇವರಾಜ ಕಪ್ಪದೂರು ಉಪಸ್ಥಿತರಿದ್ದರು.