ಶಿವಮೊಗ್ಗ: ನಗರದ ಸಿ. ಭೀಮಸೇನರಾವ್ (ಸಿಬಿಆರ್) ಕಾನೂನು ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ನ್ಯಾಯದೀಕ್ಷಾ’ ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.
ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ವಿದ್ಯಾರ್ಥಿಗಳಿಗೆ ಪದವಿ ವಿತರಿಸಿ, ಶುಭ ಹಾರೈಸಿದರು. ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಅವರು ವಿದ್ಯಾರ್ಥಿಗಳಿಗೆ ವೃತ್ತಿಪರ ಪ್ರತಿಜ್ಞಾವಿಧಿ ಬೋಧಿಸಿದರು.

‘ಸಂವಿಧಾನವೇ ಸರ್ವೋಚ್ಚ ಧರ್ಮಗ್ರಂಥʼ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ, ‘ನಾವು ಅನುಸರಿಸುವ ಧರ್ಮಗ್ರಂಥಗಳು ದೇವರ ಮನೆಯಲ್ಲಿರಲಿ. ಆದರೆ, ಸಮಾಜಕ್ಕೆ ಬಂದಾಗ ಸಂವಿಧಾನವೇ ನಮ್ಮ ಧರ್ಮಗ್ರಂಥವಾಗಬೇಕು’ ಎಂದು ಪ್ರತಿಪಾದಿಸಿದರು.
‘ದೇಶದಲ್ಲಿ ವಿವಿಧ ಧರ್ಮಗಳ ಜನರಿದ್ದರೂ, ಸಂವಿಧಾನವೇ ನಮಗೆ ಸರ್ವೋಚ್ಚ ಮಾರ್ಗದರ್ಶಿಯಾಗಿದೆ. ಅದರ ಅಡಿಯಲ್ಲೇ ನಾವೆಲ್ಲರೂ ಹಕ್ಕು ಹಾಗೂ ಸೌಲಭ್ಯಗಳನ್ನು ಪಡೆದಿದ್ದೇವೆ. ಸಂವಿಧಾನವನ್ನು ಎತ್ತಿಹಿಡಿದು, ಕಾನೂನಿನ ಚೌಕಟ್ಟಿನಲ್ಲಿ ಮುನ್ನಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದರು.
‘ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿʼ
‘ಧರ್ಮ ಎಂದರೆ ಕೇವಲ ಧಾರ್ಮಿಕತೆಯಲ್ಲ, ಅದು ಸಮಾಜದ ಸುಧಾರಣೆ ಮತ್ತು ಏಳಿಗೆಗಾಗಿ ಶ್ರಮಿಸುವುದಾಗಿದೆ. ಇಂದು ಸಮಾಜದಲ್ಲಿ ಗೋಡೆಗಳನ್ನು ಕಟ್ಟುವ ಕೆಲಸವಾಗುತ್ತಿದೆ, ಆದರೆ ನಾವು ಸೇತುಗಳನ್ನು ನಿರ್ಮಿಸಬೇಕಿದೆ. ಕಾನೂನು ಅಭ್ಯಾಸ ಮಾಡುವವರು ಜನಸಾಮಾನ್ಯರ ಸಮಸ್ಯೆ ಮತ್ತು ಆಶೋತ್ತರಗಳನ್ನು ಅರ್ಥೈಸಿಕೊಳ್ಳಬೇಕು. ಮಾನವ ಧರ್ಮವನ್ನು ಕಾನೂನಿನ ಪಾಠದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
‘ಕಾರ್ಯಾಂಗ ಮತ್ತು ಶಾಸಕಾಂಗದ ಲೋಪಗಳನ್ನು ಪ್ರಶ್ನಿಸುವ ಅಧಿಕಾರ ನ್ಯಾಯಾಂಗಕ್ಕಿದೆ. ನ್ಯಾಯದ ಪರವಾಗಿ ಬರುವ ಸಣ್ಣ ಧ್ವನಿಯನ್ನೂ ಆಲಿಸಲು ನ್ಯಾಯಾಲಯ ಸದಾ ಸಿದ್ಧವಿರುತ್ತದೆ. ಸಮಾಜದಲ್ಲಿನ ಅನ್ಯಾಯವನ್ನು ಸಂವಿಧಾನ ಹಾಗೂ ದೇಶಕ್ಕೆ ಎಸಗಿದ ದ್ರೋಹ ಎಂದು ಪರಿಗಣಿಸಿದಾಗ ಮಾತ್ರ ಸೂಕ್ತ ನ್ಯಾಯ ಒದಗಿಸಲು ಸಾಧ್ಯ’ ಎಂದರು.
‘ಕಾನೂನು ಪದವಿಯನ್ನು ಸಮಾಜದ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು. ಅಶಿಕ್ಷಿತರು, ದಮನಿತರು ಹಾಗೂ ಶೋಷಿತರ ಪರವಾಗಿ ಕೆಲಸ ಮಾಡಿ. ಜನರು ಇಂದಿಗೂ ನ್ಯಾಯಾಲಯಗಳ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಪೋಷಕರು ಮತ್ತು ಗುರುಗಳನ್ನು ಗೌರವಿಸಿ, ಜೀವನದಲ್ಲಿ ಉದಾತ್ತ ಮೌಲ್ಯಗಳನ್ನು ಅಳವಡಿಸಿಕೊಂಡಾಗ ನ್ಯಾಯದೀಕ್ಷೆ ಸಾರ್ಥಕವಾಗುತ್ತದೆ’ ಎಂದು ನ್ಯಾ. ಶ್ರೀಶಾನಂದ ವಿದ್ಯಾರ್ಥಿಗಳಿಗೆ ತಿಳಿಸಿದರು.
ಪಾಶ್ಚಾತ್ಯ ಗೌನ್ ಬದಲು ದೇಶಿ ಉಡುಪು
ಪದವಿ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಈ ಬಾರಿ ಪಾಶ್ಚಾತ್ಯ ಶೈಲಿಯ ಗೌನ್ ಬದಲಿಗೆ ಸಾಂಪ್ರದಾಯಿಕ ಉಡುಪುಗಳ ಬಳಕೆ ಗಮನ ಸೆಳೆಯಿತು. ನ್ಯಾಯಮೂರ್ತಿ ವಿ. ಶ್ರೀಶಾನಂದ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಸಾಂಪ್ರದಾಯಿಕವಾಗಿ ಪಂಚೆ, ಶಲ್ಯ ಹಾಗೂ ಮೈಸೂರು ಪೇಟ ಧರಿಸಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳು ಸಹ ಶಲ್ಯ ಧರಿಸಿ ಪದವಿ ಪ್ರಮಾಣಪತ್ರ ಸ್ವೀಕರಿಸಿ ಸಂಭ್ರಮಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಅನಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್, ಪ್ರಮುಖರಾದ ಅನಂತದತ್ತ, ಅಶ್ವತ್ಥ ನಾರಾಯಣ ಶೆಟ್ಟಿ, ಸಿದ್ದರಾಮಣ್ಣ ಮೈಲಾರಪ್ಪ, ಕಿಶೋರ್ ಶೀನಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
