ಶಿವಮೊಗ್ಗ: ಜವಾಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನ (JNNCE) ಇನ್ಫಾರ್ಮೇಷನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ ಜುಲೈ 24 ಮತ್ತು 25 ರಂದು 24 ಗಂಟೆಗಳ ನಿರಂತರ ರಾಷ್ಟ್ರಮಟ್ಟದ ಮೇಧಾದೃಷ್ಟಿ ಎಐ ಹ್ಯಾಕಥಾನ್ ಅನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ವಲಯದ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸುವ ಉದ್ದೇಶದಿಂದ ಈ ಹ್ಯಾಕಥಾನ್ ಹಮ್ಮಿಕೊಳ್ಳಲಾಗಿದೆ. ಹ್ಯಾಕಥಾನ್ ದಿನದಂದು ಬೆಳಿಗ್ಗೆಯೆ ಪ್ರಾಬ್ಲಮ್ ಸ್ಟೇಟ್ಮೆಂಟ್ ನೀಡಲಾಗುತ್ತದೆ. ವಿದ್ಯಾರ್ಥಿಗಳು 24 ಗಂಟೆಗಳ ಒಳಗೆ ಪರಿಹಾರಗಳನ್ನು ಕಂಡುಹಿಡಿಯಬೇಕಾಗುತ್ತದೆ ಎಂದು ತಿಳಿಸಿದರು.

ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗಿ
ರಾಷ್ಟ್ರಮಟ್ಟದ ಸ್ಪರ್ಧೆಗೆ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 54 ಕಾಲೇಜುಗಳಿಂದ 120 ತಂಡಗಳು ಭಾಗವಹಿಸಲಿವೆ. ಸುಮಾರು 500 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ JNN ಕಾಲೇಜಿನ 30 ತಂಡಗಳು ಸೇರಿವೆ ಎಂದು ಡಾ. ವೈ.ವಿಜಯ ಕುಮಾರ್ ತಿಳಿಸಿದರು.
ಹೇಗಿರುತ್ತೆ ಹ್ಯಾಕಥಾನ್? ಏನೇನು ಸ್ಪರ್ಧೆ ಇರುತ್ತೆ?
ಜೆಎನ್‌ಎನ್ ಕಾಲೇಜು ಐಎಸ್ ಅಂಡ್ ಇ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ.ಆರ್.ಜೆ, ಎರಡು ಟ್ರಾಕ್‌ಗಳಲ್ಲಿ ಸಮಸ್ಯೆಗಳ ವಿವರಗಳನ್ನು ಸಿದ್ಧಪಡಿಸಲಾಗುತ್ತದೆ. ಐಐಟಿ ಮತ್ತು ಎನ್‌ಐಟಿ ಪ್ರೊಫೆಸರ್‌ಗಳು ಸಮಸ್ಯೆಗಳ ವಿವರ ಸಿದ್ಧಪಡಿಸಿದ್ದು, ಹ್ಯಾಕಥಾನ್‌ನಲ್ಲಿ ಎಐ ಟೂಲ್‌ಗಳ ನೇರ ಬಳಕೆ ತಡೆಯಲು ಮತ್ತು ವಿದ್ಯಾರ್ಥಿಗಳ ಸ್ವಂತ ಸೃಜನಶೀಲತೆಗೆ ಅವಕಾಶ ನೀಡುವಂತೆ ವಿನ್ಯಾಸ ಮಾಡಲಾಗಿದೆ ಎಂದು ತಿಳಿಸಿದರು.
- ಟ್ರ್ಯಾಕ್ 1: ಆರೋಗ್ಯ ರಂಗದ ಭವಿಷ್ಯಕ್ಕಾಗಿ ಎಕ್ಸ್‌ರೇ, ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ನಂತಹ ಸಂಕೀರ್ಣ ವೈದ್ಯಕೀಯ ಡೇಟಾವನ್ನು ವಿಶ್ಲೇಷಿಸಿ, ವೈದ್ಯರಿಗೆ ವೇಗವಾಗಿ ಹಾಗೂ ನಿಖರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಸ್ಮಾರ್ಟ್ ಕಂಪ್ಯೂಟರ್ ವಿಷನ್ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸುವುದು.
- ಟ್ರ್ಯಾಕ್ 2: ಸ್ವಾಯತ್ತ ಮಾರ್ಗಸೂಚಿ, ಸ್ಮಾರ್ಟ್ ಸರ್ವೇಕ್ಷಣೆ ಅಥವಾ ರಿಯಲ್-ಟೈಮ್ ಇಂಡಸ್ಟ್ರಿ ಡಿಫೆಕ್ಟ್ ಟ್ರ್ಯಾಕಿಂಗ್‌ಗಾಗಿ ಆಟೋಮೇಷನ್ ಸಿಸ್ಟಮ್‌ಗಳನ್ನು ನಿರ್ಮಿಸುವ ಸವಾಲು.
₹2,00,000 ಲಕ್ಷದವರೆಗೆ ನಗದು ಬಹುಮಾನ
ವಿಜೇತ ತಂಡಗಳಿಗೆ ಒಟ್ಟು ₹2,00,000ಗಳವರೆಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರತಿ ಟ್ರ್ಯಾಕ್‌ಗೆ ಪ್ರತ್ಯೇಕವಾಗಿ ಮೊದಲ ಬಹುಮಾನ ₹50,000, ಎರಡನೇ ಬಹುಮಾನ ₹30,000 ಹಾಗೂ ಮೂರನೇ ಬಹುಮಾನ ₹20,000 ನಗದು ನೀಡಲಾಗುವುದು. ಹ್ಯಾಕಥಾನ್‌ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಆರ್.ಸಂಜೀವ್ ಕುಂಟೆ, ಅರುಣ್ ಕುಮಾರ್.ಪಿ, ಮನಿಷಾ.ಕೆ.ಎಂ, ವಿಶೃತಾ ರಾಣಿ.ಎಸ್.ಎನ್ ಇದ್ದರು.