ಶಿವಮೊಗ್ಗ: ಅಧ್ಯಾತ್ಮದ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುತ್ತಿರುವ ರಾಮಕೃಷ್ಣ ಸಂಸ್ಥೆಗೆ ಈಗ ಪಿಯು ಕಾಲೇಜಿನ ಗರಿಮೆ ಮೂಡಿರುವುದು ಅತ್ಯಂತ ಸ್ವಾಗತಾರ್ಹ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲನಂದನಾಥ ಮಹಾಸ್ವಾಮೀಜಿ ತಿಳಿಸಿದರು. (ಈ ಸುದ್ದಿಯನ್ನು ಇನ್ನು 62 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಅನುಪಿನಕಟ್ಟೆಯಲ್ಲಿ ನಿರ್ಮಿಸಲಾಗಿರುವ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ನ ರಾಮಕೃಷ್ಣ ಪಿಯು ಕಾಲೇಜು ಹಾಗೂ ವಿದ್ಯಾರ್ಥಿ ನಿಲಯದ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ರಾಮಕೃಷ್ಣ ಪರಮಹಂಸರ ಅವರ ಹೆಸರಿನಲ್ಲಿ ಅರ್ಥಪೂರ್ಣ ಯೋಚನೆಯೊಂದಿಗೆ ವಿಜ್ಞಾನ ಕಾಲೇಜು ಆರಂಭಗೊಂಡಿರುವುದು ಪ್ರಶಂಸನೀಯ. ವಿಜ್ಞಾನ, ಶಿಕ್ಷಣ ಮತ್ತು ಬದುಕನ್ನು ಅರ್ಥೈಸಿಕೊಳ್ಳಲು ವಿವೇಕಾನಂದರ ಪೂರ್ವ ಹಾಗೂ ನಂತರದ ಅವಧಿಯ ಚರಿತ್ರೆಯನ್ನು ಅವಲೋಕಿಸಬೇಕಾಗಿದೆ. ಜಗತ್ತಿನ ಸೇವೆಯನ್ನು ಮಾಡುತ್ತಾ ಮುಕ್ತಿ ಪಡೆ ಎಂಬ ರಾಮಕೃಷ್ಣ ಆಶ್ರಮದ ಧ್ಯೇಯೋದ್ದೇಶ ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.
ಶಿವಮೊಗ್ಗದ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ವಿನಯಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಿ, ಚಾರಿತ್ರ್ಯದಿಂದ ಶೋಭಿಸುವ ತೇಜಸ್ವಿ ಯುವಕರ ಪಡೆಯನ್ನು ಬೆಳೆಸಬೇಕೆಂಬ ಸ್ವಾಮಿ ವಿವೇಕಾನಂದರ ಆಶಯದಂತೆ ಈ ಸಂಸ್ಥೆಯಲ್ಲಿ ಶ್ರದ್ಧೆ, ವಿನಯ ಹಾಗೂ ಸಾಮರಸ್ಯದ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲಾಗುತ್ತಿದೆ ಎಂದರು.
ಸಂಸ್ಥೆಯ ಟ್ರಸ್ಟಿ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, 1991 ರಲ್ಲಿ ಕೇವಲ 5 ಮಕ್ಕಳ ಹಾಸ್ಟೆಲ್ ಹಾಗೂ 8 ವಿದ್ಯಾರ್ಥಿಗಳ ಶಾಲೆಯೊಂದಿಗೆ ಆರಂಭವಾದ ಈ ಸಂಸ್ಥೆಯಲ್ಲಿ ಇಂದು 15 ಸಾವಿರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಸಂಸ್ಥೆಯ ಅಧ್ಯಕ್ಷ ಡಾ. ನಾಗೇಶ್ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಶೋಭಾ ಆರ್. ವೆಂಕಟರಮಣ ಉಪಸ್ಥಿತರಿದ್ದರು.