ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 AUGUST 2023
SHIMOGA : ಮಳೆ (Rain) ಕೈಕೊಟ್ಟಿರುವುದರಿಂದ ಜಿಲ್ಲೆಯಾದ್ಯಂತ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಮಧ್ಯೆ ಲೋಡ್ ಶೆಡ್ಡಿಂಗ್ (Load Shedding) ಆರಂಭವಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ಬಾರಿ ಮುಂಗಾರು ವಿಳಂಬವಾದರು ಜುಲೈ ತಿಂಗಳಲ್ಲಿ ಬಿರುಸು ಪಡೆದಿತ್ತು. ಇದನ್ನು ನಂಬಿ ಕೃಷಿ ಚಟುವಟಿಕೆ ಆರಂಭಿಸಿದ್ದ ರೈತರು (Farmers) ಈಗ ಮಳೆಯಿಲ್ಲದೆ ಹೈರಾಣಾಗಿದ್ದಾರೆ. ಭತ್ತ (Paddy) ನಾಟಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬರುವ ಮೊದಲೆ ಮೆಕ್ಕೆ ಜೋಳ ಒಣಗಿ ಹೋಗುತ್ತೆಯೇ ಎಂಬ ಭೀತಿಯಲ್ಲಿದ್ದಾರೆ.
ಒಣಗುವ ಭೀತಿಯಲ್ಲಿ ಮೆಕ್ಕೆಜೋಳ
ಮಳೆ ನಂಬಿ ಕಳೆದ ತಿಂಗಳು ಜಿಲ್ಲೆಯಾದ್ಯಂತ ರೈತರು ಮಕ್ಕೆ ಜೋಳ ಬಿತ್ತನೆ ಮಾಡಿದ್ದರು. ಬೆಳೆ ಉಳಿಸಿಕೊಳ್ಳಲು ಕಳೆ ತೆಗೆಸಿ, ಕೀಟನಾಶಕಕ್ಕೆ ಎಂದು ಪ್ರತಿ ಎಕರೆಗೆ ಸಾವಿರಾರು ರೂ. ಖರ್ಚು ಮಾಡಿದ್ದರು. ಈಗ ಗಿಡಗಳು ಮೇಲೇಳುತ್ತಿದ್ದು ಮಳೆಯ ಅಗತ್ಯವಿದೆ. ಆದರೆ ಆಗಸ್ಟ್ ತಿಂಗಳ ಆರಂಭದಿಂದ ಮಳೆ ಮಾಯವಾಗಿದೆ. ಹಾಗಾಗಿ ಹೊಲದಲ್ಲಿಯೇ ಮೆಕ್ಕೆಜೋಳ (Jowar) ಒಣಗುವ ಭೀತಿ ಎದುರಾಗಿದೆ. ಜಮೀನಿನಲ್ಲಿ ಬೋರ್‌ವೆಲ್, ಬಾವಿ ಹೊಂದಿರುವವರು ನೀರು ಹಾಯಿಸಿ, ತಕ್ಕ ಮಟ್ಟಿಗೆ ಬೆಳೆ ಉಳಿಸಿಕೊಂಡಿದ್ದಾರೆ. ಮಳೆಯಾಶ್ರಿತ ರೈತರು ಕೈಗೆ ಬಂದದ್ದು ಬಾಯಿಗೆ ಬರುವುದೊ ಇಲ್ಲವೊ ಎಂದು ಆಗಸದತ್ತ ಮುಖ ಮಾಡಿದ್ದಾರೆ.
ಭತ್ತ ಬೆಳೆಗಾರರದ್ದು ನಾಟಿಗೆ ಸಂಕಷ್ಟ
ಮಳೆ ನಂಬಿ ಭತ್ತ (Paddy) ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ಕೃಷಿಕರು ಈಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಸಾಮಾನ್ಯವಾಗಿ ಜುಲೈ – ಆಗಸ್ಟ್ ತಿಂಗಳಲ್ಲಿ ಭತ್ತ ನಾಟಿ ಕೆಲಸ ಶುರುವಾಗುತ್ತದೆ. ಸಸಿ ಮಡಿ ಬಿಟ್ಟಿದ್ದು ನೀರಿಲ್ಲದ ಕಾರಣ ನಾಟಿ ಮಾಡುತ್ತಿಲ್ಲ. ಕೊಳೆವೆಬಾವಿ ಹೊಂದಿರುವವರು ನೀರು ಹಾಯಿಸಿ ನಾಟಿ ಕೆಲಸ ಮಾಡಿದ್ದಾರೆ. ಮಳೆಯಾಗುವ ನಿರೀಕ್ಷೆಯಲ್ಲಿ ನಾಟಿ ಮಾಡಿದ್ದವರು ಈಗ ಸಸಿಗಳಿಗೆ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಮಡಿ ಬಿಟ್ಟವರು ಹಾಗೆ ಬಿಟ್ಟರೆ ಸಸಿ ಹಾಳಾಗುವ ಆತಂಕದಲ್ಲಿದ್ದಾರೆ.
ಇದನ್ನೂ ಓದಿ – ‘ಶರಾವತಿ ಸಂತ್ರಸ್ತರ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ, ರೈತರ ಹಿತ ಕಾಯಲು ಕಾನೂನು ಸಮರಕ್ಕು ಸಿದ್ಧ’
ಗಾಯದ ಮೇಲೆ ಲೋಡ್‌ಶೆಡ್ಡಿಂಗ್ ಬರೆ
ಮಳೆಯಿಲ್ಲದೆ ರೈತರು ಸಂಕಷ್ಟಕ್ಕೀಡಾದ ಹೊತ್ತಿನಲ್ಲೇ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ. ಕೊಳವೆ ಬಾವಿಗಳಿಂದ ಜಮೀನಿಗೆ ನೀರು ಹಾಯಿಸಲು ವಿದ್ಯುತ್ ಅನಿವಾರ್ಯ. ಬಹುಹೊತ್ತು ಲೋಡ್‌ಶೆಡ್ಡಿಂಗ್ ಆಗುತ್ತಿರುವುದರಿಂದ ಜನರು ಬೋರ್‌ವೆಲ್‌ನಿಂದ ನೀರೆತ್ತಲು ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ.
ಜಿಲ್ಲೆಯಾದ್ಯಂತ ಮಳೆ ಎಷ್ಟು ಕಡಿಮೆಯಾಗಿದೆ?
ಶಿವಮೊಗ್ಗ ಜಿಲ್ಲೆಯಾದ್ಯಂತ ವಾಡಿಕೆಯಂತೆ ಆಗಸ್ಟ್ ತಿಂಗಳಲ್ಲಿ 624 ಮಿ.ಮೀ ಮಳೆಯಾಗಬೇಕು. ಆದರೆ ಈತನಕ 116.30 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 21.60 ಮಳೆಯಾಗಿದೆ (ವಾಡಿಕೆ 136 ಮಿ.ಮೀ), ಭದ್ರಾವತಿ 28.30 ಮಿ.ಮೀ (ವಾಡಿಕೆ 161 ಮಿ.ಮೀ), ತೀರ್ಥಹಳ್ಳಿ 107 ಮಿ.ಮೀ ಆಗಿದೆ (ವಾಡಿಕೆ 782 ಮಿ.ಮೀ), ಸಾಗರ 106.60 ಮಿ.ಮೀ ಮಳೆಯಾಗಿದೆ (ವಾಡಿಕೆ 624 ಮಿ.ಮೀ), ಶಿಕಾರಿಪುರ 20.20 ಮಿ.ಮೀ ಮಳೆಯಾಗಿದೆ (ವಾಡಿಕೆ 178 ಮಿ.ಮೀ), ಸೊರಬದಲ್ಲಿ 37.50 ಮಿ.ಮೀ ಮಳೆಯಾಗಿದೆ (ವಾಡಿಕೆ 329 ಮಿ.ಮೀ), ಹೊಸನಗರದಲ್ಲಿ 116.30 ಮಿ.ಮೀ ಮಳೆಯಾಗಿದೆ (ವಾಡಿಕೆ 624 ಮಿ.ಮೀ).
ಇದನ್ನೂ ಓದಿ – ಮಹಿಳೆಯರಿಗೆ 2 ಸಾವಿರ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ, ಶಿವಮೊಗ್ಗದಲ್ಲಿ ಅಧಿಕಾರಿಗಳಿಗೆ ಡಿಸಿ 3 ಸೂಚನೆ
ಕೊನೆ ವಾರದಲ್ಲಿ ಮಳೆ ನಿರೀಕ್ಷೆ
ರಾಜ್ಯದಲ್ಲಿ ಆಗಸ್ಟ್ ತಿಂಗಳ ಕೊನೆಗೆ ಮಳೆ ಚುರುಕಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕರಾವಳಿ, ಉತ್ತರ ಒಳನಾಡು ಭಾಗದಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗಿದೆ. ಆದರೆ ಇತರೆ ಭಾಗಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಆಗಸ್ಟ್ ತಿಂಗಳ ಕೊನೆಯ ಹೊತ್ತಿಗೆ ಮಳೆ ಆಗುವ ಸಧ್ಯತೆ ಇದೆ ಎಂದು ತಿಳಿಸಿದ್ದಾರೆ. ಸದ್ಯ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದಾರೆ.