ಶಿವಮೊಗ್ಗ: ಮೀಶೋ ಆನ್‌ಲೈನ್ ಶಾಪಿಂಗ್ ಕಂಪನಿಯ ಹೆಸರಿನ ಸ್ಕ್ರಾಚ್ ಕಾರ್ಡ್ ನಂಬಿ, ಬಹುಮಾನದ ಆಸೆಗೆ ಮಹಿಳೆಯೊಬ್ಬರು ₹23.40 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಜ್ಯೂಸ್ ಸೆಂಟರ್ ಮಾಲಕಿಗೆ ಅಂಗಡಿಯಲ್ಲಿದ್ದಾಗ ಮೀಶೋ ಆನ್‌ಲೈನ್ ಶಾಪಿಂಗ್ ಕಂಪನಿಯ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಬಂದಿತ್ತು. ಅದನ್ನು ತೆರೆದು ನೋಡಿದಾಗ ಮೀಶೋ ಕಂಪನಿಯ 10ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಲಕ್ಕಿ ಡ್ರಾ ಸ್ಪರ್ಧೆ ಆಯೋಜಿಸಲಾಗಿದೆ. ಅದರಲ್ಲಿ ಸ್ಕ್ರಾಚ್ ಕಾರ್ಡ್ ನೀಡಲಾಗಿದೆ ಎಂದು ಇತ್ತು. ಕಾರ್ಡ್ ಸ್ಕ್ರಾಚ್ ಮಾಡಿ ನೋಡಿದಾಗ ಮೊದಲ ಬಹುಮಾನವಾಗಿ ಮಹೇಂದ್ರ 9ಎಸ್ ಕಾರು ಎಂದು ಬಂದಿತ್ತು.

ದಾಖಲೆ ಕಳುಹಿಸಿದ ಮಹಿಳೆ
ಮೊದಲ ಬಹುಮಾನ ಬಂದಿದ್ದಕ್ಕೆ ಖುಷಿಯಾದ ಜ್ಯೂಸ್ ಸೆಂಟರ್ ಮಾಲಕಿ, ಆ ಕಾರ್ಡ್‌ನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದರು. ವಾಟ್ಸಾಪ್ ಮೂಲಕ ಪಾನ್ ಕಾರ್ಡ್ ಹಾಗೂ ಭಾವಚಿತ್ರವನ್ನು ಕಳುಹಿಸಲು ಸೂಚಿಸಲಾಯಿತು. ಅದರಂತೆ ಮಹಿಳೆ ತಮ್ಮ ದಾಖಲೆಗಳನ್ನು ರವಾನಿಸಿದ್ದರು.
ಬಳಿಕ ಕರೆ ಮಾಡಿದ ವಂಚಕರು, ನಿಮಗೆ ಮೊದಲ ಬಹುಮಾನವಾಗಿ ಮಹೀಂದ್ರಾ 9S ಕಾರು ಬಂದಿದೆ, ಕಾರು ಇಲ್ಲವೇ ಅದರ ಮೌಲ್ಯದ ₹24,85,980 ನಗದು ಹಣ ಪಡೆಯಬಹುದು ಎಂದು ನಂಬಿಸಿದ್ದಾರೆ. ನಗದು ಹಣ ಪಡೆಯಲು ಒಪ್ಪಿದ ಮಹಿಳೆಗೆ, ಹಣ ಬಿಡುಗಡೆ ಮಾಡಲು ವಿವಿಧ ಶುಲ್ಕಗಳನ್ನು ಪಾವತಿಸುವಂತೆ ಕೇಳಿದ್ದಾರೆ. ವಂಚಕರ ಮಾತು ನಂಬಿದ ಮಹಿಳೆ ಹಂತ ಹಂತವಾಗಿ ಒಟ್ಟು ₹23,40,179 ಹಣವನ್ನು ವಂಚಕರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಎಷ್ಟು ಹಣ ನೀಡಿದರೂ ಬಹುಮಾನದ ಮೊತ್ತ ಕೈಸೇರದೆ ಇದ್ದಾಗ ತಾವು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ. ಘಟನೆ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.