ಶಿವಮೊಗ್ಗ : ಎಪಿಎಂಸಿಗಳಲ್ಲಿ ಅಡಿಕೆ (Adike) ನೇರ ಖರೀದಿಗೆ ಕಡಿವಾಣ ಹಾಕಲಿದ್ದು, ಖಾಸಗಿಯವರಿಗೆ ಪರವಾನಗಿ ನೀಡುವುದಿಲ್ಲ. ಕ್ಯಾಂಪ್ಕೋಸ್, ಮ್ಯಾಮ್ಕೋಸ್ನಂತಹ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಶಿವಮೊಗ್ಗ ಜಿಲ್ಲೆಯ ಅಡಿಕೆ (Adike) ಬೆಳೆಗಾರರು ಹಾಗೂ ಅಡಿಕೆ ಮಾರಾಟ ಸಹಕಾರ ಸಂಘಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಗೋಪಾಲಕೃಷ್ಣ ಬೇಳೂರು ನೇತೃತ್ವದ ಸಹಕಾರ ಸಂಘಗಳ ಮುಖಂಡರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು.
ಅಡಿಕೆ ಅಕ್ರಮ ವಹಿವಾಟಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ ಎಪಿಎಂಸಿಯಲ್ಲಿ ನೇರ ಖರೀದಿ ಮೂಲಕ ಸಂಗ್ರಹವಾಗಿರುವ ಸೆಸ್ ಹಾಗೂ ಸಹಕಾರ ಸಂಘಗಳ ಮೂಲಕ ನಡೆದ ವಹಿವಾಟಿನಿಂದ ಸಂಗ್ರಹವಾಗಿರುವ ಸೆಸ್ ಪ್ರಮಾಣದ ಬಗ್ಗೆ ವಾರದಲ್ಲಿ ವರದಿ ಕೊಡಿ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಶಿವಾನಂದ ಕಾಪಸೆ ಅವರಿಗೆ ನಿರ್ದೇಶನ ನೀಡಿದರು.
ಮಿನಿಸ್ಟರ್ ಸೂಚನೆಗಳೇನು? ಇಲ್ಲಿದೆ ಪಾಯಿಂಟ್ಸ್
ಖಾಸಗಿ ವರ್ತಕರಲ್ಲಿ ಕೆಲವರು ತೆರಿಗೆ ವಂಚನೆ ಮಾಡುವುದನ್ನು ನಿಯಂತ್ರಿಸಲು ವಿಚಕ್ಷಣ ದಳ ರಚನೆ ಮಾಡಲಾಗಿದ್ದು, ನಾಲ್ಕು ಚೆಕ್ಪೋಸ್ಟ್ಗಳನ್ನು ರಚನೆ ಮಾಡಲಾಗುವುದು.
ಸಹಕಾರ ಸಂಘಗಳಿಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದ್ದು, ಅಗತ್ಯ ಸಹಕಾರ ನೀಡಲಾಗುವುದು. ಲಾಭ ಮಾಡುವುದು ಎಪಿಎಂಸಿ ಉದ್ದೇಶವಲ್ಲ. ಆಯಾ ಎಪಿಎಂಸಿಗಳಿಂದ ಬರುವ ಆದಾಯವನ್ನು ಸ್ಥಳೀಯವಾಗಿ ಅಭಿವೃದ್ಧಿಗೆ ವಿನಿಯೋಗ ಮಾಡುವುದು ಸರ್ಕಾರದ ಉದ್ದೇಶ. ಎಪಿಎಂಸಿಗಳು ಆರ್ಥಿಕವಾಗಿ ಸದೃಢವಾದರೆ ರೈತರಿಗೆ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ.
ಅಡಿಕೆ ದಾಸ್ತಾನು ಮಾಡುವ ಗೋದಾಮುಗಳ ಬಾಡಿಗೆಯನ್ನು ಈಗಾಗಲೇ ಶೇ 40ರಷ್ಟು ಕಡಿಮೆ ಮಾಡಲಾಗಿದೆ. ಶಿವಮೊಗ್ಗ ಎಪಿಎಂಸಿಗೆ ಮಾಹಿತಿ ಇಲ್ಲದಿದ್ದರೆ ಇಲ್ಲಿನ ಅಧಿಕಾರಿಗಳ ಮೂಲಕ ನಿರ್ದೇಶನ ನೀಡಿ ಕಡಿಮೆ ಮಾಡಿರುವ ಬಾಡಿಗೆಯನ್ನು ಆಕರ ಮಾಡಲು ನಿರ್ದೇಶನ ನೀಡಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಗೋದಾಮುಗಳಿಗೆ ಬೇಡಿಕೆ ಇದ್ದು, ಅಗತ್ಯ ಜಾಗವನ್ನು ಇಲಾಖೆಯಿಂದಲೇ ಖರೀದಿಸಿ ಗೋದಾಮು ನಿರ್ಮಾಣ ಮಾಡಲಾಗುವುದು.
ಖಾಸಗಿ ಎಪಿಎಂಸಿಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಉತ್ತೇಜಿಸುವುದಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಾಲ್ಕು ಖಾಸಗಿ ಎಪಿಎಂಸಿಗಳಿಗೆ ಪರವಾನಗಿ ನೀಡಲಾಗಿದೆ. ಈ ಖಾಸಗಿ ಎಪಿಎಂಸಿಗಳನ್ನು ಮುಚ್ಚಬೇಕು ಎಂಬ ಬೇಡಿಕೆ ಕೂಡಾ ಇದೆ.
ಕೃಷಿಯೇತರ ವಹಿವಾಟಿಗೆ ತಡೆ
ರಾಜ್ಯದ ಹಲವು ಎಪಿಎಂಸಿಗಳಲ್ಲಿ ಕೃಷಿಯೇತರ ವಹಿವಾಟು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕಿರಾಣಿ ಅಂಗಡಿಗಳು, ಸಿಮೆಂಟ್, ಸ್ಟೀಲ್ ವಿತರಕರು, ಪ್ಲಾಸ್ಟಿಕ್ ವ್ಯಾಪಾರಿಗಳೂ ಇದ್ದಾರೆ. ಹಲವು ಕಡೆ ವಾಸದ ಮನೆಗಳನ್ನೂ ನಿರ್ಮಿಸಲಾಗಿದೆ. ಎಪಿಎಂಸಿಗಳು ಸಂಪೂರ್ಣವಾಗಿ ಕೃಷಿ ವಹಿವಾಟಿಗೆ ಸೀಮಿತವಾಗಿರಬೇಕು ಎಂಬುದು ಸರ್ಕಾರದ ಆಶಯ. ಕೃಷಿಯೇತರ ವಹಿವಾಟು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಖಾಸಗಿ ಎಪಿಎಂಸಿ ಮುಚ್ಚಿ : ಬೇಳೂರು
ರಾಜ್ಯದಲ್ಲಿರುವ ಖಾಸಗಿ ಎಪಿಎಂಸಿಗಳನ್ನು ಮುಚ್ಚಬೇಕು. ಹೊಸದಾಗಿ ಖಾಸಗಿಯವರಿಗೆ ಅನುಮತಿ ನೀಡಬಾರದು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ಸಚಿವ ಶಿವಾನಂದ ಪಾಟೀಲ, ಸರ್ಕಾರ ಯಾವುದೇ ಕಾರಣಕ್ಕೂ ಖಾಸಗಿ ಎಪಿಎಂಸಿಗಳಿಗೆ ಅನುಮತಿ ಕೊಡುವುದಿಲ್ಲ. ಸರ್ಕಾರದ ಎಪಿಎಂಸಿಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ರೈತರಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಿಸಿರುವ ನಾಲ್ಕು ಖಾಸಗಿ ಮಾರುಕಟ್ಟೆಗಳನ್ನು ಮುಚ್ಚುವ ಬೇಡಿಕೆ ಇದೆ ಎಂದು ಹೇಳಿದರು.
ಇದನ್ನೂ ಓದಿ » ಶರಾವತಿ ಭೂಗತ ವಿದ್ಯುತ್ ಯೋಜನೆ, ಶಿವಮೊಗ್ಗದಲ್ಲಿ ಬೀದಿಗಿಳಿದ ಪರಿಸರವಾದಿಗಳು, ವಿದ್ಯಾರ್ಥಿಗಳು, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200