ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 MAY 2023
HUBBALLI : ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಯೋಜನೆಗಳ (Railway Projects) ಕುರಿತು ಸಂಸದ ಬಿ.ವೈ.ರಾಘವೇಂದ್ರ ಹುಬ್ಬಳ್ಳಿಯ ನೈಋತ್ಯ ರೈಲ್ವೆ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದರು. ನೈಋತ್ಯ ರೈಲ್ವೆಯ ಮಹಾ ಪ್ರಬಂಧಕ ಸಂಜೀವ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಏನೇನೆಲ್ಲ ಚರ್ಚೆಯಾಯ್ತು?
ನೂರು ಕೋಟಿ ರೂ. ಅನುದಾನ
ತಾಳಗುಪ್ಪ, ಶಿವಮೊಗ್ಗ ನಗರ, ಸಾಗರ ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕೆ ಸಂಸದ ರಾಘವೇಂದ್ರ ಒತ್ತಾಯಿಸಿದ್ದರು. ಇದರ ಫಲವಾಗಿ ಅಮೃತ್ ಭಾರತ್ ಯೋಜನೆ ಅಡಿ ಮೂರು ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ತಾಳಗುಪ್ಪ ನಿಲ್ದಾಣಕ್ಕೆ 22.5 ಕೋಟಿ ರೂ., ಶಿವಮೊಗ್ಗ ನಿಲ್ದಾಣಕ್ಕೆ 19.28 ಕೋಟಿ ರೂ., ಸಾಗರ ನಿಲ್ದಾಣಕ್ಕೆ 21.10 ಕೋಟ ರೂ., ಶಿವಮೊಗ್ಗ ಗೂಡ್ಸ್ ಯಾರ್ಡ್ ಅಭಿವೃದ್ದಿಗೆ 33 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ನಿಲ್ದಾಣಗಳಲ್ಲಿ ಹೈಟೆಕ್ ಸವಲತ್ತು
ಪ್ರಯಾಣಿಕ ಸ್ನೇಹಿ ಸವಲತ್ತುಗಳಾದ ಗ್ರಾನೇಟ್ ನೆಲಹಾಸಿನ ಪ್ಲಾಟ್ ಫಾರಂ, ಡಿಜಿಟಲ್ ಸಿಗ್ನಲ್ಸ್, ಪ್ಲಾಟ್ ಫಾರಂ ಶೆಲ್ಟರ್, ಪಾರ್ಕಿಂಗ್ ಜಾಗದಲ್ಲಿ ಶೆಡ್ ನಿರ್ಮಾಣ, ಕಾಂಪೌಂಡ್ ವಾಲ್ ನಿರ್ಮಾಣ, ಸರ್ಕುಲೇಟಿಂಗ್ ಏರಿಯಾ ಅಭಿವೃದ್ಧಿ, ನಿಲ್ದಾಣದ ಸೌಂದರೀಕರಣ, ನಿಲ್ದಾಣದ ಮುಂಭಾಗದ ಉದ್ಯಾನವನ, ಫುಟ್ ಓವರ್ ಬ್ರಿಡ್ಜ್, ಆಧುನಿಕ ಶೌಚಾಲಯಗಳು, ಉತ್ತಮ ಗುಣಮಟ್ಟದ ವಿದ್ಯುತ್ ಬೆಳಕಿನ ವ್ಯವಸ್ಥೆ, ಸಿ.ಸಿ.ಟಿ.ವಿ ರೈಲ್ವೆ ಉದ್ಘೋಷಣಾ ವ್ಯವಸ್ಥೆ ಸೇರಿ ಹಲವು ಸವಲತ್ತುಗಳನ್ನು ಒದಗಿಸುವ ಯೋಜನೆಯು ಮಂಜೂರಾತಿ ಗೊಂಡಿದೆ.
ಗೂಡ್ಸ್ ಯಾರ್ಡ್ ಆಧುನೀಕರಣ
ಶಿವಮೊಗ್ಗ (Railway Projects) ಗೂಡ್ಸ್ ಯಾರ್ಡ್‌ನಲ್ಲಿ ಮೂಲ ಸೌಕರ್ಯ ಹೆಚ್ಚಿಸಬೇಕಿದೆ. ಇದರಿಂದ ಶಿವಮೊಗ್ಗ ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರ, ಪಡಿತರ ಧಾನ್ಯ, ಸಿಮೆಂಟ್, ಕಬ್ಬಿಣ ಮತ್ತಿತರ ಅಗತ್ಯ ವಸ್ತುಗಳು ಶೀಘ್ರವಾಗಿ ಲಭ್ಯವಾಗುವಂತೆ ಮಾಡಲು ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ರೈಲ್ವೆ ಉನ್ನತಾಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದ ಮೊದಲ ಇಂದಿರಾ ಕ್ಯಾಂಟೀನ್ ಈಗ ಹೇಗಿದೆ? ಊಟ, ತಿಂಡಿ ಸಿಕ್ತಿದ್ಯ? ಪ್ರತಿದಿನ ಎಷ್ಟು ಜನ ಬರ್ತಾರೆ?
ಹೊಸ ರೈಲ್ವೆ ಮಾರ್ಗದ ಕೆಲಸ ಶುರು
ಮಲೆನಾಡು – ಉತ್ತರ ಕರ್ನಾಟಕವನ್ನು ಬೆಸೆಯುವ ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗಕ್ಕೆ 1200 ಕೋಟಿ ರೂ. ಅನುದಾನ ಮಂಜೂರಾಗಿದೆ. ಮೊದಲನೇ ಹಂತವಾದ ಶಿವಮೊಗ್ಗ-ಶಿಕಾರಿಪುರ (46 ಕಿ.ಮೀ) ನಡುವಿನ ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ವಾರದಿಂದ ಕಾಮಗಾರಿ ಪ್ರಾರಂಭಿಸಲಾಗುತ್ತದೆ. 2025ರ ಡಿಸೆಂಬರ್ ವೇಳೆಗೆ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಶಿವಮೊಗ್ಗದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು
ಮೂರು ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ ಕಾಮಗಾರಿಗಳು ನಡೆಯುತ್ತಿವೆ. ಭದ್ರಾವತಿ ಕಡದಕಟ್ಟೆ ಹತ್ತಿರದ ಕಾಮಗಾರಿಯು 2023ರ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ. ಶಿವಮೊಗ್ಗದ ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ 2023ರ ಅಕ್ಟೋಬರ್‌ಗೆ, ಕಾಶಿಪುರ ಗೇಟ್ ಬಳಿ ಮೇಲ್ಸೇತುವೆ ಜೂನ್ ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಕೋಚಿಂಗ್ ಡಿಪೋ ಕೆಲಸ ಶುರು
ಕೋಟೆ ಗಂಗೂರಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. 3 ಪ್ಲಾಟ್ ಫಾರಂ ಇರುವ ಕೋಟೆಗಂಗೂರಿನ ನೂತನ ರೈಲ್ವೆ ನಿಲ್ದಾಣ, 2 ಪಿಟ್‍ಲೈನ್, 3 ಸಿಕ್‍ಲೈನ್, 3 ಸ್ಟೇಬಲಿಂಗ್ ಲೈನ್‍ಗಳನ್ನು ಹೊಂದಲಿದೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಗೊಂಡಿದೆ. 2024ರ ಮೇ ಅಥವಾ ಜೂನ್ ಗೂ ಮೊದಲು ಈ ಕಾಮಗಾರಿ ಪೂರ್ಣಗೊಳಿಸುವುದಾಗಿ ನೈರುತ್ಯ ರೈಲ್ವೆಯ ಸಭೆಯಲ್ಲಿ ತಿಳಿಸಿರುತ್ತಾರೆ.
ವಂದೇ ಭಾರತ್ ರೈಲು ಸಂಚಾರ
ಭವಿಷ್ಯದಲ್ಲಿ ವಂದೇ ಭಾರತ್ ರೈಲುಗಳನ್ನು ಸಹ ಇಲ್ಲಿ ನಿರ್ವಹಣೆ ಮಾಡಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಬೆಂಗಳೂರು ಮತ್ತು ಶಿವಮೊಗ್ಗ ನಗರಗಳ ಮಧ್ಯೆ ವಂದೇ ಭಾರತ ರೈಲು ಸೇವೆ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಕುರಿತಂತೆ ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ತಾಳಗುಪ್ಪ – ಶಿರಸಿ – ಹುಬ್ಬಳಿ ಸರ್ವೆ ಕಂಪ್ಲೀಟ್
ತಾಳಗುಪ್ಪ – ತಡಸ – ಹೊನ್ನಾವರ – ಶಿರಸಿ – ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗ ಯೋಜನೆಯ ಸರ್ವೆ ಕಾಮಗಾರಿ ಪೂರ್ಣಗೊಂಡಿದೆ. ನೈರುತ್ಯ ರೈಲ್ವೆಯು ಸರ್ವೆ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ. ಸಂಸದರು ಈ ಯೋಜನೆ ಮಂಜೂರು ಮಾಡಲು ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರನ್ನು ಈಗಾಗಲೇ ಕೋರಿದ್ದು, ನೈರುತ್ಯ ರೈಲ್ವೆಯಿಂದಲು ಸಹ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಯಿತು.
ಅರಸಾಳು, ಹಾರನಹಳ್ಳಿಯಲ್ಲಿ ರೈಲಿಗೆ ಬೇಕು ಸ್ಟಾಪ್
ಅರಸಾಳು ಮತ್ತು ಹಾರನಹಳ್ಳಿಯಲ್ಲಿ ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಮಾಡಲು ಸಂಸದ ರಾಘವೇಂದ್ರ ಒತ್ತಾಯಿಸಿರು. ಈ ಕುರಿತು ಅಗತ್ಯ ಕ್ರಮಕೈಗೊಳ್ಳುವುದಾಗಿ ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದರು.
ವೇಳಾಪಟ್ಟಿಯಲ್ಲಿ ಸಣ್ಣಪುಟ್ಟ ಬದಲಾವಣೆ ಬೇಕು
ಶಿವಮೊಗ್ಗ, ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಅಳವಡಿಸಿಕೊಳ್ಳಬೇಕು. ಈ ರೈಲುಗಳ ಸೇವೆಯನ್ನು ಮತ್ತಷ್ಟು ಜನ ಸ್ನೇಹಿಯಾಗಿಸುವಂತೆ ಮಾಡಬೇಕು ಎಂದು ಸಂಸದ ರಾಘವೇಂದ್ರ ಮನವಿ ಮಾಡಿದರು. ನೈರುತ್ಯ ರೈಲ್ವೆಯು ಈ ಪ್ರಸ್ತಾವನೆಯನ್ನು ಪರಿಶೀಲಿಸಿ, ಸೂಕ್ತ ಬದಲಾವಣೆ ಮಾಡುವುದಾಗಿ ತಿಳಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422