ಶಿವಮೊಗ್ಗ: ನಗರದಲ್ಲಿ ಸಂಚರಿಸುವ ಆಟೋರಿಕ್ಷಾಗಳಲ್ಲಿ ಮೀಟರ್ ಅಳವಡಿಸದೇ ಪ್ರಯಾಣಿಕರಿಂದ ಅವೈಜ್ಞಾನಿಕವಾಗಿ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಕೇಳಿಬಂದಿದೆ. ಈ ಹಿನ್ನೆಲೆ, ಮುಂದಿನ 10 ದಿನಗಳೊಳಗಾಗಿ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳುವಂತೆ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTO) ಆದೇಶಿಸಿದೆ. (ಈ ಸುದ್ದಿಯನ್ನು ಇನ್ನು 32 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಯ ಹಿತದೃಷ್ಟಿಯಿಂದ ಶಿವಮೊಗ್ಗ ನಗರದ ಎಲ್ಲಾ ಆಟೋರಿಕ್ಷಾ ಚಾಲಕರು ಹಾಗೂ ಮಾಲೀಕರು ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು. ಪ್ರಾಧಿಕಾರ ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆಟೋರಿಕ್ಷಾ ಚಾಲಕರು ಮೀಟರ್ ಪ್ರಕಾರ ಬಾಡಿಗೆ ಪಡೆಯದಿದ್ದರೆ ಅಥವಾ ಮೀಟರ್ ಹಾಕಲು ನಿರಾಕರಿಸಿದರೆ ಸಾರ್ವಜನಿಕರು ತಕ್ಷಣವೇ ಸಾರಿಗೆ ಇಲಾಖೆಯ ಸಹಾಯವಾಣಿ ಮೊಬೈಲ್ ಸಂಖ್ಯೆ: 8277983404 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.