ಶಿವಮೊಗ್ಗ ಲೈವ್.ಕಾಂ | SHIMOGA NEWS | 19 JUNE 2021
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದ ಉಂಟಾಗಬಹುದಾದ ಅನಾಹುತಗಳನ್ನು ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಮುಂಗಾರು ಮಳೆ ಹಿನ್ನೆಲೆ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಕುರಿತು ಮುಖ್ಯಮಂತ್ರಿ ಅವರ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿ ಎದುರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಶೇ.20ರಷ್ಟು ಹೆಚ್ಚು ಮಳೆ
ಜಿಲ್ಲೆಯಲ್ಲಿ ಕಳೆದ 18 ದಿನಗಳಲ್ಲಿ ಸರಾಸರಿಗಿಂತ ಶೇ.20ರಷ್ಟು ಹೆಚ್ಚಿನ ಮಳೆಯಾಗಿದೆ. ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಿಗೆ ಕಳೆದ ಒಂದು ವಾರದಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತುಂಗಾಭದ್ರಾ ಜಲಾಶಯ ಬಹುತೇಕ ತುಂಬಿದೆ. ಎಲ್ಲಾ ಜಲಾಶಯಗಳ ನೀರಿನ ಮಟ್ಟದ ಬಗ್ಗೆ ನಿರಂತರ ನಿಗಾ ವಹಿಸಲಾಗಿದೆ. 67 ಗ್ರಾಮ ಪಂಚಾಯತ್‍ಗಳ 163 ಗ್ರಾಮಗಳು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 74 ಪ್ರದೇಶಗಳು ಹಾಗೂ 18 ಮುಖ್ಯ ರಸ್ತೆಗಳನ್ನು ಅತಿವೃಷ್ಟಿಯಿಂದ ತೊಂದರೆ ಉಂಟಾಗಬಹುದಾದ ಸ್ಥಳಗಳೆಂದು ಗುರುತಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗಿದೆ ಎಂದು ಹೇಳಿದರು.
ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ
ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಕೊರತೆ ಇರುವುದಿಲ್ಲ. 26459 ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ಇದ್ದು, 30242 ಕ್ವಿಂಟಾಲ್ ದಾಸ್ತಾನಿದೆ. ಎಲ್ಲಾ ಕಡೆ ಕೃಷಿ ಚಟುವಟಿಕೆ ಆರಂಭವಾಗಿದ್ದು, ಈಗಾಗಲೇ 3341 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ರಸಗೊಬ್ಬರವನ್ನು ಬೇಡಿಕೆಗೆ ಅನುಸಾರವಾಗಿ ಹಂತ ಹಂತವಾಗಿ ದಾಸ್ತಾನು ಮಾಡಲಾಗುತ್ತಿದೆ. ಜೂನ್ ಅಂತ್ಯದವರೆಗೆ 52ಸಾವಿರ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಬೇಡಿಕೆ ಇದ್ದು, 1.07 ಮೆ.ಟನ್ ದಾಸ್ತಾನಿದೆ ಎಂದು ತಿಳಿಸಿದರು.
ಮಳೆಯಿಂದ ಜೀವ ಹಾನಿ, ಮನೆ ಹಾನಿ
ಪ್ರಸ್ತುತ ಸಾಲಿನಲ್ಲಿ ಮಳೆಯಿಂದ 3 ಮಾನವ ಜೀವ ಹಾನಿ ಸಂಭವಿಸಿದ್ದು, 15 ಲಕ್ಷ ರೂ. ಪರಿಹಾರ ನೀಡಲಾಗಿದೆ. 2 ಜಾನುವಾರುಗಳು ಮೃತಪಟ್ಟಿದ್ದು 60 ಸಾವಿರ ರೂ. ನೀಡಲಾಗಿದೆ. 4 ಮನೆಗಳು ಶೇ.75ರಷ್ಟು ಹಾಗೂ 69 ಮನೆಗಳು ಸ್ವಲ್ಪಮಟ್ಟಿನ ಹಾನಿಗೀಡಾಗಿದ್ದು ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಡಿಸಿ ಖಾತೆಗೆ ಅನುದಾನ ಬಿಡುಗಡೆ
ಅತಿವೃಷ್ಟಿಯಿಂದ ಮಾನವ ಜೀವ ಹಾನಿ ಹಾಗೂ ಜಾನುವಾರುಗಳಿಗೆ ಹಾನಿಯಾಗದಂತೆ ಗರಿಷ್ಟ ಎಚ್ಚರಿಕೆ ವಹಿಸಬೇಕು. ಜಾನುವಾರುಗಳಿಗೆ ಸಾಕಷ್ಟು ಮೇವು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ವ್ಯವಸ್ಥೆ ಮಾಡಬೇಕು. ಅತಿವೃಷ್ಟಿ ಪರಿಹಾರ ಕಾಮಗಾರಿಗಳಿಗೆ ಯಾವುದೇ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಲಾಗಿದ್ದು, ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200