ಶಿವಮೊಗ್ಗದ ಯುವ ದಸರಾದಲ್ಲಿ ನಟ ರವಿಚಂದ್ರನ್‌, ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

ಶಿವಮೊಗ್ಗ: ಮನೆಯಲ್ಲಿ ತಾಯಿ, ಹೆಂಡತಿ ಹಾಗೂ ಹೆಣ್ಣುಮಕ್ಕಳಿಗೆ ಪ್ರೀತಿ-ಗೌರವ ನೀಡಿದರೆ ಆ ಮನೆಯಲ್ಲಿ ಪ್ರತಿದಿನವೂ ದಸರಾ ಹಬ್ಬದ ಸಂಭ್ರಮವಿರುತ್ತದೆ ಎಂದು ಚಲನಚಿತ್ರ ನಟ ಹಾಗೂ ನಿರ್ದೇಶಕ ವಿ.ರವಿಚಂದ್ರನ್ ಹೇಳಿದರು. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ದಸರಾ-2026ರ ಯುವ ದಸರಾ ಮ್ಯೂಸಿಕಲ್‌ ನೈಟ್ಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Actor V Ravichandran Speaks at Shivamogga Dasara 2026 1

ರವಿಚಂದ್ರನ್‌ ಏನೆಲ್ಲ ಹೇಳಿದರು?

POINT-1

ಕುಟುಂಬದಲ್ಲಿ ಹೆಣ್ಣುಮಕ್ಕಳಿಗೆ ಸೂಕ್ತ ಗೌರವ ಹಾಗೂ ಸ್ಥಾನಮಾನ ನೀಡಿದಾಗ ಮಾತ್ರ ಆ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸುತ್ತದೆ. ಮನೆಯಲ್ಲಿ ತಾಯಿ, ಹೆಂಡತಿ ಹಾಗೂ ಹೆಣ್ಣುಮಕ್ಕಳಿಗೆ ಪ್ರೀತಿ-ಗೌರವ ನೀಡಿದರೆ ಆ ಮನೆಯಲ್ಲಿ ಪ್ರತಿದಿನವೂ ದಸರಾ ಹಬ್ಬದ ಸಂಭ್ರಮವಿರುತ್ತದೆ.

POINT-2

ದಿನವೂ ದೇವರಲ್ಲಿ ಪ್ರಾರ್ಥಿಸುವಾಗ ಮುಂದೆ ಸಾಗಲು ಧೈರ್ಯ, ಒಳ್ಳೆಯ ಹಾದಿಯಲ್ಲಿ ನಡೆಯಲು ವಿವೇಕ ಹಾಗೂ ಇನ್ನೊಬ್ಬರ ನೋವನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ನೀಡುವಂತೆ ಕೇಳಿಕೊಳ್ಳುತ್ತೇನೆ. ನನ್ನ ತಂದೆ ವೀರಸ್ವಾಮಿ ನನಗೆ ಕಾಯಕ ನಿಷ್ಠೆ ಮತ್ತು ಧೀರತನ ಕಲಿಸಿದರೆ, ತಾಯಿ ಪ್ರೀತಿಯನ್ನು ಧಾರೆ ಎರೆದಿದ್ದಾರೆ. ನಮ್ಮ ನಗುವಿಗಿಂತ, ನಮ್ಮಿಂದ ಇನ್ನೊಬ್ಬರ ಮುಖದಲ್ಲಿ ಮೂಡುವ ನಗುವೇ ನಿಜವಾದ ಸಂತೋಷ

POINT-3

ಶಾಂತಿ ಕ್ರಾಂತಿ ಚಿತ್ರದ ಬಿಡುಗಡೆ ವೇಳೆ ಕಲೆಕ್ಷನ್ ಕಡಿಮೆಯಾಗಿ ಕಷ್ಟದಲ್ಲಿದ್ದಾಗ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರು ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಿ ಬೆಂಬಲಿಸಿದ್ದರು. ತಾಯಿ ತೀರಿಕೊಂಡಾಗ ಮೊದಲು ಕರೆ ಮಾಡಿ ಧೈರ್ಯ ತುಂಬಿದವರು ಬಿ.ಎಸ್. ಯಡಿಯೂರಪ್ಪ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನೆಗೆ ಬಂದು ಬೆಂಬಲವಾಗಿ ನಿಂತರು. ಹಿರಿಯರು ತೋರಿದ ಈ ಪ್ರೀತಿ-ವಿಶ್ವಾಸವೇ ನನ್ನ ದೊಡ್ಡ ಆಸ್ತಿ.

POINT-4

ಪ್ರಪಂಚ ಸುತ್ತುವ ಬದಲು ಕರುನಾಡಿನ ಮೂಲೆ ಮೂಲೆಗೂ ತೆರಳಿ ಅಭಿಮಾನಿಗಳನ್ನು ಭೇಟಿಯಾಗಬೇಕೆಂದು ನಿರ್ಧರಿಸಿದ್ದೇನೆ. ಶಿವಮೊಗ್ಗದ ಸಂಸ್ಕೃತಿಯ ಕುರಿತು ಸಿನಿಮಾ ಮಾಡಲು ಸಿದ್ಧನಿದ್ದೇನೆ. 30 ಹಾಡುಗಳಿರುವ ತಮ್ಮ ಐ ಆಮ್ ಗಾಡ್ ಚಿತ್ರ ನಿರ್ಮಿಸುತ್ತಿದ್ದೇನೆ.  ನನ್ನ ನೋವು ನನಗಾದರೆ ನಾನು ಜೀವಂತವಾಗಿದ್ದೇನೆ ಎಂದರ್ಥ, ಇನ್ನೊಬ್ಬರ ನೋವು ನನಗಾದರೆ ನಾನು ಮನುಷ್ಯನಾಗಿದ್ದೇನೆ ಎಂದರ್ಥ ಎಂಬ ವಿಷಯದ ಸುತ್ತ ಈ ಚಿತ್ರ ಮೂಡಿಬರಲಿದೆ.

ಶಿವಮೊಗ್ಗ ದಸರಾಕ್ಕೆ ಹಾಡಿನ ಕೊಡುಗೆ

ಶಿವಮೊಗ್ಗ ದಸರಾಕ್ಕಾಗಿ ರವಿಚಂದ್ರನ್ ಅವರು ಕೇವಲ ಎರಡೇ ದಿನಗಳಲ್ಲಿ ವಿಶೇಷ ಗೀತೆಯೊಂದನ್ನು ರಚಿಸಿ, ಸಂಗೀತ ಸಂಯೋಜನೆ ಮಾಡಿಕೊಟ್ಟಿದ್ದರು. ಡ್ರಾಮಾ ಜೂನಿಯರ್ಸ್ ಖ್ಯಾತಿಯ ಭದ್ರಾವತಿಯ ಬಾಲಕಲಾವಿದೆ ಇಂಚರ ಅವರು ಈ ಗೀತೆಗೆ ನೃತ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್‌.ಅರುಣ್‌, ಡಾ.ಧನಂಜಯ ಸರ್ಜಿ, ಜವಳಿ ಮೂಲಸೌಲಭ್ಯ ಮತ್ತು ವಿದ್ಯುತ್‌ ಮಗ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್‌ ಗೌಡ, ಸೂಡಾ ಅಧ್ಯಕ್‌ ಸಿ.ಜಿ.ಮಧುಸೂದನ್‌, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಹೆಚ್‌.ಸಿ.ಯೋಗೇಶ್‌, ಪ್ರಮುಖರಾದ ಆಯನೂರು ಮಂಜುನಾಥ್‌, ಆರ್. ಪ್ರಸನ್ನ ಕುಮಾರ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಸೇರಿ ಹಲವರು ಇದ್ದರು.