ಸಾಧು ಕೋಕಿಲ ಹಾಡು, ಕಾಮಿಡಿ, ಭರ್ಜರಿ ಡಾನ್ಸ್‌, ಹೇಗಿತ್ತು ದಸರಾ ಮ್ಯೂಸಿಕಲ್‌ ನೈಟ್ಸ್‌?

ಶಿವಮೊಗ್ಗ: ನಗರದ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ಯುವ ದಸರಾ ಕಾರ್ಯಕ್ರಮದಲ್ಲಿ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಮತ್ತು ತಂಡ ನಡೆಸಿಕೊಟ್ಟ ‘ಮ್ಯೂಸಿಕಲ್ ನೈಟ್’ ಪ್ರೇಕ್ಷಕರನ್ನು ರಂಜಿಸಿತು. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಸಾಧು ಕೋಕಿಲ ಅವರು ಹಾಡು ಹಾಗೂ ಹಾಸ್ಯದ ಚಟಾಕಿಗಳೊಂದಿಗೆ ಮ್ಯೂಸಿಕಲ್‌ ನೈಟ್ಸ್‌ ಕಳೆಗಟ್ಟಿತು. 16 ವರುಷ ಕಳೆದುಹೋಗುವುದು, ನೀನೊಂದು ಮುಗಿಯದ ಮೌನ, ಬಾಬಾರೋ ರಸಿಕ, ಸುಂಟರಗಾಳಿ, ತಪ್ಪು ಮಾಡದವರು ಯಾರವರೆ, ನೀ ನನ್ನಿ ಬೆಳಕಂಗಿದ್ದೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ ಹಲವು ಗೀತೆಗಳನ್ನು ಸಾಧು ಕೋಕಿಲ ಹಾಡಿದಾಗ ಪ್ರೇಕ್ಷಕರು ಮೊಬೈಲ್ ಫ್ಲ್ಯಾಶ್ ಲೈಟ್ ಆನ್ ಮಾಡಿ ಧ್ವನಿಗೂಡಿಸಿದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕಾಣದ ಕಡಲಿಗೆ ಹಂಬಲಿಸಿದೆ ಮನ ಗೀತೆ ಪ್ರಸ್ತುತಪಡಿಸಿ ಪ್ರೇಕ್ಷಕರನ್ನು ಭಾವಪರವಶಗೊಳಿಸಿದರು.

Sadhu Kokila Musical Nights at Shivamogga Dasara 2026

ಗಾಯಕರಾದ ರಾಗರಂಜನಿ, ಚನ್ನಪ್ಪ, ವಸುಶ್ರೀ, ಶಿವಮೊಗ್ಗದ ಗಾಯಕ ಚೇತನ್, ಸಾಧು ಕೋಕಿಲ ಅವರ ಸಹೋದರಿ ಉಷಾ ಕೋಕಿಲ ಹಾಗೂ ಸುಬ್ರಮಣ್ಯ ತಮ್ಮ ಮಧುರ ಕಂಠದಿಂದ ಕಲಾಪ್ರೇಮಿಗಳನ್ನು ರಂಜಿಸಿದರು.

ಎಂಎಲ್‌ಎ ಜೊತೆ ಜುಗಲ್ಬಂದಿ

ಸ್ಟಾರ್‌ ಸಿಂಗರ್‌ ಗಾನಸುಧೆಯ ಮಧ್ಯೆ ಶಾಸಕ ಎಸ್.ಎನ್. ಚನ್ನಬಸಪ್ಪ, ಸಾಧು ಕೋಕಿಲ ಅವರ ಜತೆ ಯಾರೇ ಕೂಗಾಡಲಿ ಊರೇ ಹೋರಾಡಲಿ ಹಾಡನ್ನು ಹಾಡಿದರು. ಇದೇ ವೇಳೆ ಮಹಾನಗರ ಪಾಲಿಕೆ ವತಿಯಿಂದ ಸಾಧು ಕೋಕಿಲ ಅವರನ್ನು ಗೌರವಿಸಲಾಯಿತು.

ಸಾಧು ಕೋಕಿಲ ಏನೆಲ್ಲ ಹೇಳಿದರು?

ಇದೇ ವೇಳೆ ಮಾತನಾಡಿದ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ, ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ, ಸಂಸ್ಕೃತಿ ಮತ್ತು ನಾಡಹಬ್ಬದ ಆಚರಣೆಯಲ್ಲಿ ಎಲ್ಲಾ ಪಕ್ಷದ ನಾಯಕರು ಒಂದಾಗಿ ಭಾಗವಹಿಸಿರುವ ಈ ಏಕತೆಯ ವಾತಾವರಣ ನನಗೆ ತೀವ್ರ ಸಂತಸ ತಂದಿದೆ. ಈ ಏಕತೆಗೆ ನಾನು ಶರಣಾಗಿದ್ದೇನೆ ಎಂದರು.

ನನ್ನ ಹಾಗೂ ಉಪೇಂದ್ರ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ ‘ಶ್’ ಚಿತ್ರದ ಆಡಿಯೋವನ್ನು ಮಧು ಬಂಗಾರಪ್ಪ ಅವರ ಆಕಾಶ ಆಡಿಯೋ ಸಂಸ್ಥೆಯು ಬಿಡುಗಡೆ ಮಾಡಿತ್ತು. ಅಂದು ಅವರು ನೀಡಿದ ಪ್ರೋತ್ಸಾಹವೇ ಇಂದು ನಾನು ಸ್ವತಂತ್ರ ಸಂಗೀತ ನಿರ್ದೇಶಕ ಹಾಗೂ ನಟನಾಗಿ ಬೆಳೆಯಲು ಕಾರಣ. ಮಧು ಬಂಗಾರಪ್ಪ ಅವರು ನನ್ನ ಆತ್ಮೀಯ ಸ್ನೇಹಿತರು ಎಂದು ಸಾಧು ಕೋಕಿಲ ಕೃತಜ್ಞತೆ ಸಲ್ಲಿಸಿದರು.