ಶಿವಮೊಗ್ಗ: ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ರಂಗಭೂಮಿ ಕಲಾವಿದ ಜಾನ್ ಪಾಲ್ ಅವರ ಚಿಕಿತ್ಸಾ ನೆರವಿಗಾಗಿ ವಕೀಲ ರಂಗ ಮಿತ್ರರ ವತಿಯಿಂದ ನ.13ರಂದು ಸಂಜೆ 7ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಸೋರುತಿಹುದು ಸಂಬಂಧ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ವಕೀಲ ಕೆ.ಸಿ. ಬಸವರಾಜ್ ತಿಳಿಸಿದರು. (ಈ ಸುದ್ದಿಯನ್ನು ಇನ್ನು 59 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನ್ ಪಾಲ್ ಅವರು ತಮ್ಮ ಕಲಾ ಬದುಕಿನಲ್ಲಿ ಸುಮಾರು 150 ನಾಟಕಗಳು ಹಾಗೂ ಏಳು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಕೀಲರ ಕಚೇರಿಯಲ್ಲಿ ಗುಮಾಸ್ತರಾಗಿಯೂ ಕಾರ್ಯನಿರ್ವಹಿಸಿರುವ ಅವರು, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ನೆರವಾಗುವ ಉದ್ದೇಶದಿಂದ ವಕೀಲರು ಮತ್ತು ರಂಗಕರ್ಮಿಗಳು ಒಗ್ಗೂಡಿ ನಾಟಕ ಪ್ರದರ್ಶನ ಆಯೋಜಿಸಿದ್ದಾರೆ ಎಂದರು.

ಮಹಾಂತೇಶ ರಾಮದುರ್ಗ ನಾಟಕ ರಚಿಸಿದ್ದು, ಚಂದ್ರಶೇಖರ ಹಿರೇಗೋಣಿಗೆರೆ ನಿರ್ದೇಶನ ಮಾಡಿದ್ದಾರೆ. ಕೌಟುಂಬಿಕ ಹಾಗೂ ಸಾಮಾಜಿಕ ಸಂಬಂಧಗಳ ಮಹತ್ವ ಸಾರುವ ನಾಟಕವು ಮನರಂಜನೆಯೊಂದಿಗೆ ಮಾನವೀಯ ಸಂದೇಶವನ್ನೂ ಒಳಗೊಂಡಿದೆ ಎಂದರು.
ಹೊಂಗಿರಣ ತಂಡದ ಸಹಕಾರ
ನಾಟಕ ಪ್ರದರ್ಶನಕ್ಕೆ ಹೊಂಗಿರಣ ಶಿವಮೊಗ್ಗ ತಂಡ ಸಹಕಾರ ನೀಡಲಿದೆ. ಪ್ರದರ್ಶನಕ್ಕೂ ಮುನ್ನ ಎ.ಎಸ್.ಕೆ. ಚಲುವರಂಗ ಕಲಾವಿದರಿಂದ ರಂಗಗೀತೆಗಳ ಗಾಯನ ನಡೆಯಲಿದೆ. ಕಲಾವಿದರ ಸಂಕಷ್ಟದ ಸಂದರ್ಭದಲ್ಲಿ ಸಮಾಜ ನೆರವಿಗೆ ಬರಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕಕ್ಕೆ ಪ್ರೋತ್ಸಾಹ ನೀಡುವ ಮೂಲಕ ಕಲಾವಿದನ ಚಿಕಿತ್ಸೆಗೆ ಸಹಕರಿಸಬೇಕು ಎಂದು ಕೆ.ಸಿ. ಬಸವರಾಜ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲರಾದ ದೇವೇಂದ್ರಪ್ಪ, ಎಸ್. ಮಂಜುನಾಥ್ ಶೆಟ್ಟಿ, ಜಗದೀಶ್, ಯೋಗೇಶ್ ಮಾನೆ, ನಾಗರಾಜ್ ಇದ್ದರು.