ಶಿವಮೊಗ್ಗ: ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಬಹುಬೆಳೆ ಮಾದರಿ ಅನುಸರಿಸಬೇಕು ಹಾಗೂ ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಹೇಳಿದರು.
ನಗರದ ಭದ್ರಾ ಕಾಡಾ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು, ಪ್ರಗತಿಪರ ರೈತರು ಹಾಗೂ ಕೃಷಿ ತಜ್ಞರೊಂದಿಗಿನ ಸಮಾಲೋಚನೆ ಮತ್ತು ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿ ಹಿರಿದಾಗಿದೆ. ರೈತರು ಕೇವಲ ಬೆಳೆ ಬೆಳೆಯುವುದಕ್ಕಷ್ಟೇ ಸೀಮಿತವಾಗದೆ, ಕೊಯ್ಲಿನ ನಂತರದ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸೂಕ್ತ ಮಾರುಕಟ್ಟೆ ಕಂಡುಕೊಳ್ಳಬೇಕು. ಕೃಷಿಯಲ್ಲಿ ನೂತನ ಆಲೋಚನೆಗಳು ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೈತರು ಆರ್ಥಿಕವಾಗಿ ಸಬಲರಾಗಲು ಸಹಕಾರ ಸಂಘಗಳು ನೆರವಾಗಬೇಕು ಎಂದರು.
ಕೃಷಿ ಯಂತ್ರೋಪಕರಣ ವಿತರಣೆ
ಇದೇ ವೇಳೆ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳ ಅರ್ಹ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಕಾಡಾ ಪ್ರಾಧಿಕಾರದ ವತಿಯಿಂದ 80ಕ್ಕೂ ಹೆಚ್ಚು ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭೂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಚಿಂತಾಲ್ ವಿ. ಹಾಗೂ ಸಹಾಯಕ ಕೃಷಿ ನಿರ್ದೇಶಕ ನಾಗೇಂದ್ರ ವೈ. ಅವರು ಪ್ರಾಧಿಕಾರದಿಂದ ಕೈಗೊಂಡಿರುವ ಯಂತ್ರೋಪಕರಣಗಳ ವಿತರಣೆ ಮತ್ತು ಪ್ರಗತಿ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಪ್ರಾಧಿಕಾರದ ಆಡಳಿತಾಧಿಕಾರಿ ಸತೀಶ್ ಆರ್., ಉಪಆಡಳಿತಾಧಿಕಾರಿ ಪ್ರಶಾಂತ್ ಕೆ., ಆತ್ಮ ಯೋಜನೆಯ ತಾಂತ್ರಿಕ ಸಹಾಯಕ ವ್ಯವಸ್ಥಾಪಕಿ ವಾಣಿ ಟಿ.ಎಂ, ಕಾರ್ಯಪಾಲಕ ಎಂಜಿನಿಯರ್ಗಳಾದ ಜಿ.ಎಸ್. ಪಟೇಲ್, ದೇವರಾಜ್ ವಿ. ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಅಚ್ಚುಕಟ್ಟು ಭಾಗದ ರೈತರು ಉಪಸ್ಥಿತರಿದ್ದರು.