SHIVAMOGGA LIVE NEWS | 19 NOVEMBER 2022
SHIMOGA : ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ವೇತನ ಆಯೋಗ ರಚಿಸಿದೆ. ಇದರ ಆದೇಶ ಹೊರಬಿದ್ದಿದ್ದು, ಆರು ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಗುಡುವು ವಿಧಿಸಲಾಗಿದೆ. ಈ ಮಧ್ಯೆ ವೇತನ ಆಯೋಗ (pay commission) ರಚನೆ ಮಾಡಿದ ಸರ್ಕಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಅಭಿನಂದನೆ ಸಲ್ಲಿಸಿದೆ. ಅಲ್ಲದೆ ಹಿಂದಿನ ಆಯೋಗಗಳಿಗಿಂತಲು ಈ ಭಾರಿಯದ್ದು ವಿಭಿನ್ನವಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.
(pay commission)
ವೇತನ ಆಯೋಗ ರಚನೆ, ಆದೇಶ ಪ್ರಕಟ
ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ.ರಾಮಮೂರ್ತಿ, ರಾಜ್ಯ ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಬಿ.ವನಹಳ್ಳಿ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರು ಸಮಿತಿಯ ಸದಸ್ಯರಾಗಿದ್ದಾರೆ. ವೇತನ ಆಯೋಗ ರಚನೆ ಸಂಬಂಧ ಸರ್ಕಾರ ಇಂದು ಸಂಜೆ ಆದೇಶ ಹೊರಡಿಸಿದೆ.
(pay commission)
ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನದ ಕುರಿತು ಪರಿಶೀಲನೆಗೆ ಸೂಚನೆ
ರಾಜ್ಯ ಸರ್ಕಾರಿ ನೌಕರರ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸಿ, ನೂತನ ವೇತನ ಶ್ರೇಣಿಯನ್ನು ರಚಿಸಬೇಕು. ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆಯೆ ಎಂದು ಪರಿಶೀಲಿಸಬೇಕು. ತುಟ್ಟಿಭತ್ಯೆ ಸೂತ್ರವನ್ನು ನಿರ್ಧರಿಸಬೇಕು. ಬಾಡಿಗೆ, ನಗರ ಭತ್ಯೆ, ವಿಶೇಷ ಭತ್ಯೆಗಳ ಪ್ರಮಾಣವನ್ನು ಪರಿಶೀಲಿಸಬೇಕು. ಇವುಗಳಲ್ಲಿ ಬದಲಾವಣೆ ಅಗತ್ಯವಿದ್ದಲ್ಲಿ ಸಲಹೆ ನೀಡಬಹುದು. ನಿವೃತ್ತಿ ವೇತನ ಮತ್ತು ಸೌಲಭ್ಯಗಳನ್ನು ಪರಿಶೀಲಿಸುವಂತೆ ಸರ್ಕಾರ ಆದೇಶದಲ್ಲಿ ತಿಳಿಸಿದೆ.
(pay commission)
ಈ ಹಿಂದೆ ವೇತನ ಆಯೋಗಕ್ಕಾಗಿ ಮುಷ್ಕರ, ಧರಣಿ ನಡೆಸಬೇಕಾಗುತ್ತಿತ್ತು
ವೇತನ ಆಯೋಗ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದರು. ‘ಈ ಹಿಂದೆ ವೇತನ ಆಯೋಗ ರಚನೆ ಸಂಬಂಧ ಹಲವು ಭಾರಿ ದೆಹಲಿಗೆ ಭೇಟಿ ನೀಡಬೇಕಾಗುತ್ತಿತ್ತು. ಮುಷ್ಕರ, ಧರಣಿಗಳನ್ನು ನಡೆಸಬೇಕಾಗುತ್ತಿತ್ತು. ಆದರೆ ಈ ಭಾರಿ ಮುಖ್ಯಮಂತ್ರಿಗಳ ಜೊತೆಗೆ ಒಂದೆರಡು ಸಭೆ ನಡೆಸಲಾಯಿತು. ಆಯೋಗ ರಚನೆಗೆ ಮನವಿ ಸಲ್ಲಿಸಲಾಯಿತು. ಅದರಂತೆ ಸರ್ಕಾರ ವೇತನ ಆಯೋಗ ರಚನೆ ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಧನ್ಯವಾದ’ ಎಂದು ತಿಳಿಸಿದರು.
ಇದೇ ಮೊದಲ ಭಾರಿ 4 ವರ್ಷ 7 ತಿಂಗಳಿಗೆ ಆಯೋಗ ರಚನೆ
ಮೊದಲು ವೇತನ ಆಯೋಗವನ್ನು ಐದೂವರೆ ವರ್ಷಕ್ಕೆ ರಚನೆ ಮಾಡಲಾಗುತ್ತಿತ್ತು. ಆಯೋಗ ಅಧ್ಯಯನ ನಡೆಸಿ, ವರದಿ ನೀಡುವಷ್ಟರಲ್ಲಿ ಹೆಚ್ಚಿನ ಸಮಯ ಕಳೆದು ಹೋಗುತ್ತಿತ್ತು. ಆದರೆ ಈ ಭಾರಿ 4 ವರ್ಷ 7 ತಿಂಗಳಿಗೆ ಆಯೋಗ ರಚನೆ ಮಾಡಲಾಗಿದೆ. ಆಯೋಗ ತನ್ನ ವರದಿ ಸಲ್ಲಿಸಲು ಸರ್ಕಾರ 6 ತಿಂಗಳ ಗಡುವು ನಿಗದಿ ಮಾಡಿದೆ. ‘ಈಗಾಗಲೆ ಆಯೋಗಕ್ಕೆ ಬೆಂಗಳೂರಿನಲ್ಲಿ ಕಚೇರಿ ಸಿದ್ಧವಾಗುತ್ತಿದೆ. ಇನ್ನೊಂದು ವಾರದಲ್ಲಿ ಕಚೇರಿ ಸಿದ್ಧವಾಗಲಿದ್ದು, ಸದಸ್ಯರು ತಮ್ಮ ಕೆಲಸ ಪ್ರಾರಂಭಿಸಲಿದ್ದಾರೆ. ಸರ್ಕಾರಿ ನೌಕರರ ಸಂಘದ ವತಿಯಿಂದ ಕೆಲವು ಬೇಡಿಕೆಗಳಿವೆ. ಅವುಗಳನ್ನು ಆಯೋಗಕ್ಕೆ ತಿಳಿಸಲಾಗುತ್ತದೆ’ ಎಂದು ಸಿ.ಎಸ್.ಷಡಾಕ್ಷರಿ ತಿಳಿಸಿದರು.
ALSO READ | ಶಿವಮೊಗ್ಗ ಡಿಸಿ, ಎಸ್ಪಿಗೆ ಮೀಟರ್ ಹಾಕದೆ, ಯದ್ವ ತದ್ವ ದುಡ್ಡು ಕೇಳಿದ ಆಟೋ ಚಾಲಕ, ಮುಂದೇನಾಯ್ತು?
ಈ ಭಾರಿಯ ವೇತನ ಆಯೋಗಕ್ಕಿಲ್ಲ ತರಹೇವಾರಿ ಜವಾಬ್ದಾರಿಯ ಹೊರೆ
ರಾಜ್ಯದಲ್ಲಿ 1952ರಿಂದ ಈವರೆಗೆ 12 ವೇತನ ಆಯೋಗಗಳನ್ನು ರಚನೆ ಮಾಡಲಾಗಿದೆ. ಈ ಮೊದಲು ಆಯೋಗಗಳು ವೇತನ ಪರಿಷ್ಕರಣೆಯ ಜೊತೆಗೆ ಆಡಳಿತ ಸುಧಾರಣೆ, ಸರ್ಕಾರಿ ನೌಕರರ ಜವಾಬ್ದಾರಿ, ಕಾರ್ಯ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಿ, ವರದಿ ನೀಡಬೇಕಾಗಿತ್ತು. ಇದೆ ಕಾರಣಕ್ಕೆ ವರದಿ ಸಲ್ಲಿಕೆ ವಿಳಂಬವಾಗುತ್ತಿತ್ತು. ಆದರೆ ಈ ಭಾರಿ ಸರ್ಕಾರ ವೇತನ ಆಯೋಗಕ್ಕೆ ವೇತನ ಪರಿಷ್ಕರಣೆ, ವಿವಿಧ ಭತ್ಯೆಗಳು ಮತ್ತು ನಿವೃತ್ತಿ ವೇತನದ ಕುರಿತು ಅಧ್ಯಯನಕ್ಕೆ ಮಾತ್ರ ಆದೇಶಿಸಿದೆ.
‘ವರದಿ ನೀಡಲು ಸರ್ಕಾರ ಆರು ತಿಂಗಳ ಗಡುವು ನೀಡಿದೆ. ಅದರೆ ಅದಕ್ಕಿಂತಲು ಮುಂಚಿತವಾಗಿಯೇ ಆಯೋಗ ವರದಿ ನೀಡಬಹುದಾಗಿದೆ. ಮಾರ್ಚ್ ತಿಂಗಳಿಂದಲೆ ವರದಿ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಯೋಗದ ವರದಿಯತ್ತ ಲಕ್ಷ ಲಕ್ಷ ನೌಕರರ ನಿರೀಕ್ಷೆ
7ನೇ ವೇತನ ಆಯೋಗವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು, ಕಾಲೇಜುಗಳ ಬೋಧಕೇತರ ಸಿಬ್ಬಂದಿಯ (ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಯ ವೇತನ ಪಡೆಯುತ್ತಿರುವವರನ್ನು ಹೊರತುಪಡಿಸಿ) ವೇತನ ಕುರಿತು ಪರಿಶೀಲನೆ ನಡೆಸಲಿದೆ. 5.20 ಲಕ್ಷ ರಾಜ್ಯ ಸರ್ಕಾರಿ ನೌಕರರು, ವಿವಿಧ ನಿಗಮ, ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 3 ಲಕ್ಷ ಸರ್ಕಾರಿ ನೌಕರರು, 4 ಲಕ್ಷ ನಿವೃತ್ತ ನೌಕರರಿಗೆ ಅನುಕೂಲ ಆಗಲಿದೆ.
‘1200 ವಿವಿಧ ಕೇಡರ್ ನ ನೌಕರರಿಗೆ ಇದರಿಂದ ಅನುಕೂಲ ಆಗಲಿದೆ. ಸರ್ಕಾರಕ್ಕೆ 12 ಸಾವಿರ ಕೋಟಿ ರೂ. ಪ್ರತಿ ವರ್ಷ ಹೆಚ್ಚುವರಿ ಖರ್ಚು ಬರಲಿದೆ. ಐದು ವರ್ಷಕ್ಕೊಮ್ಮೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗಲಿದೆ’ ಎಂದು ಷಡಾಕ್ಷರಿ ತಿಳಿಸಿದರು.
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು