ಶಿವಮೊಗ್ಗ ದಸರಾ, ಕೊನೆಯ ಕ್ಷಣದಲ್ಲಿ ಬದಲಾಯ್ತು ಅಂಬಾರಿ ಹೊರುವ ಆನೆ, ಕಾರಣವೇನು?

ಶಿವಮೊಗ್ಗ: ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಆನೆಗಳಿಗೆ ಅಲಂಕಾರ ನಡೆಯುತ್ತಿದೆ. ಇತ್ತ ಕೊನೆಯ ಕ್ಷಣದಲ್ಲಿ ಅಂಬಾರಿ ಹೊರುವ ಆನೆಯನ್ನು ಬದಲಾಯಿಸಿ ಅರಣ್ಯ ಇಲಾಖೆ ನಿರ್ಧಾರ ಕೈಗೊಂಡಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಕಳೆದ ಆರು ವರ್ಷಗಳಿಂದ ಅಂಬಾರಿ ಹೊರತ್ತಿದ್ದ ಸಾಗರ್ ಆನೆಯ ಬದಲಾಗಿ, ಈ ಬಾರಿ ಸೋಮಣ್ಣ ಆನೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊರಲು ಅವಕಾಶ ನೀಡಲಾಗಿದೆ.

Sakrebylu-Camp-Elephant-Somanna-in-Shivamogga-Dasara

ಮೊದಲ ಯತ್ನದಲ್ಲೇ ಅಂಬಾರಿ ಹೊರಲಿದ್ದಾನೆ

ಸಕ್ರೆಬೈಲು ಆನೆ ಬಿಡಾರದ ಸೋಮಣ್ಣ ಆನೆ ಇದೇ ಮೊದಲ ಬಾರಿಗೆ ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಸೋಮಣ್ಣನಿಗೆ ಅಂಬಾರಿ ಹೊರಿಸುವ ಕುರಿತು ನಿನ್ನೆ ಸಂಜೆಯಷ್ಟೇ ಅರಣ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಜಂಬೂಸವಾರಿಯಲ್ಲಿ ಸೋಮಣ್ಣನಿಗೆ ಸಾಗರ್ ಹಾಗೂ ಬಹದ್ದೂರ್ ಆನೆಗಳು ಸಾಥ್ ನೀಡಲಿವೆ.

ಸಾಗರ್‌ ಬದಲು ಸೋಮಣ್ಣ ಆಯ್ಕೆ ಏಕೆ?

ಶಿವಮೊಗ್ಗ ದಸರಾದಲ್ಲಿ ಕಳೆದ 15 ವರ್ಷದಿಂದ ಆನೆಗಳು ಭಾಗವಹಿಸುತ್ತಿವೆ. 2017ರಿಂದ ಈಚೆಗೆ ಅಂಬಾರಿ ಹೊರುವ ಸಂಪ್ರದಾಯ ಆರಂಭವಾಯಿತು. ಮೊದಲಿನಿಂದಲು ಸಕ್ರೆಬೈಲು ಬಿಡಾರದ ಸಾಗರ್‌ ಆನೆಯೆ ಅಂಬಾರಿ ಹೊರುತ್ತಿತ್ತು. ಆದರೆ 2019ರಲ್ಲಿ ಕೊನೆಯ ಕ್ಷಣದಲ್ಲಿ ಸಾಗರ್‌ ಆನೆ ಅಸ್ವಸ್ಥಗೊಂಡಿತು. ಹಾಗಾಗಿ ಅಂಬಾರಿಯನ್ನು ಲಾರಿಯ ಮೇಲಿರಿಸಿ ಮೆರವಣಿಗೆ ಮಾಡಲಾಗಿತ್ತು. ಇನ್ನು, 2021ರಲ್ಲಿ ಕೊವಿಡ್‌ ಇತ್ತು. ಹಾಗಾಗಿ ಹೆಚ್ಚು ಜನರ ಗುಂಪುಗೂಡುವಂತಿರಲಿಲ್ಲ. ಹಾಗಾಗಿ ಆನೆ ಮೇಲೆ ಅಂಬಾರಿ ಮೆರವಣಿಗೆ ನಡೆಸಬೇಕೇ ಬೇಡವೆ ಎಂಬ ಗೊಂದಲವಿತ್ತು. ಹಾಗಾಗಿ ತಾಲೀಮು ನಡೆಸಿರಲಿಲ್ಲ. ಕೊನೆಯ ಕ್ಷಣದಲ್ಲಿ ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಆದರೆ ಅಂಬಾರಿ ಹೊತ್ತಿರಲಿಲ್ಲ.

2023ರಲ್ಲಿ ಅಂಬಾರಿ ವಿಜಯದಶಮಿ ಹಿಂದಿನ ದಿನ ಕುಮ್ಕಿ ಆನೆ ನೇತ್ರಾವತಿ ಶಿವಮೊಗ್ಗದಲ್ಲಿ ಮರಿ ಜನ್ಮ ನೀಡಿತು. ಆದ್ದರಿಂದ ಕೊನೆಯ ಕ್ಷಣದಲ್ಲಿ ಆನೆ ಮೇಲೆ ಅಂಬಾರಿ ಹೊರಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು. ಈ ಮೂರು ಬಾರಿ ಸಾಗರ್‌ ಆನೆ ಅಂಬಾರಿ ಹೊತ್ತಿರಲಿಲ್ಲ. ಈ ಬಾರಿ ಸಾಗರ್‌ ಆನೆಯೆ ಅಂಬಾರಿ ಹೊರಲಿದೆ ಎಂದು ಭಾವಿಸಲಾಗಿತ್ತು. ಆದರೆ ಸೋಮಣ್ಣ ಆನೆ ಮೇಲೆ ಅಂಬಾರಿ ಇರಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಆದರೆ ಈ ನಿರ್ಧಾರಕ್ಕೆ ಸ್ಪಷ್ಟ ಕಾರಣ ತಿಳಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ ಮೂಲಗಳ ಪ್ರಕಾರ ಸಾಗರ್‌ ಆನೆಗೆ ಕಾಲು ನೋವಿದೆ. ಹಾಗಾಗಿ ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂದು ಸೋಮಣ್ಣನಿಗೆ ಜವಾಬ್ದಾರಿ ವಹಿಸಲಾಗಿದೆ.

ಮಧ್ಯಾಹ್ನ ಜಂಬೂಸವಾರಿಗೆ ಚಾಲನೆ

ಇಂದು ಮಧ್ಯಾಹ್ನ 2:30 ಕ್ಕೆ ನಗರದ ಐತಿಹಾಸಿಕ ಕೋಟೆ ಶಿವಪ್ಪನಾಯಕ ಅರಮನೆ ಮುಂಭಾಗದಿಂದ ಅಲ್ಲಮಪ್ರಭು ಮೈದಾನದವರೆಗೆ ಜಂಬೂಸವಾರಿ ನಡೆಯಲಿದೆ. ನಂದಿ ಪೂಜೆಗೆ ಬಳಿಕ ಅಂಬಾರಿ ಮೆರವಣಿಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಚನ್ನಬಸಪ್ಪ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.