ಶಿವಮೊಗ್ಗ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2026-27 ನೇ ಸಾಲಿಗೆ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಸಿಇಟಿ, ನೀಟ್, ಪಿಸಿಸಿಇಟಿ, ಸಿಎಲ್‌ಎಟ್ ಹಾಗೂ ಐಸಿಎಆರ್ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಶೈಕ್ಷಣಿಕ ಸಾಲ ಸಿಗಲಿದೆ. ಈ ಸಾಲಿನಿಂದ ಸರ್ಕಾರಿ, ಮ್ಯಾನೇಜ್‌ಮೆಂಟ್ ಹಾಗೂ ಖಾಸಗಿ ಸೀಟಿಗಳಿಗೂ ಈ ಸೌಲಭ್ಯ ಅನ್ವಯಿಸಲಿದೆ. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಿಹೆಚ್.ಡಿ, ಐಟಿಐ ಮತ್ತು ಡಿಪ್ಲೋಮಾ ವ್ಯಾಸಂಗಕ್ಕೂ ಬಡ್ಡಿರಹಿತ ಸಾಲ ಒದಗಿಸಲಾಗುತ್ತದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಮಾನ್ಯತೆ ಪಡೆದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯಲು ₹20 ಲಕ್ಷದವರೆಗೆ ಬಡ್ಡಿರಹಿತ ಸಾಲ ಪಡೆಯಬಹುದು. ಕೋರ್ಸ್ ಮುಗಿದ 6 ತಿಂಗಳ ಬಳಿಕ 60 ಕಂತುಗಳಲ್ಲಿ ಮರುಪಾವತಿಸಬೇಕು. ಅಲ್ಲದೆ ದೇಶದ ಐಐಟಿ, ಐಐಎಂ ಹಾಗೂ ಐಐಎಸ್‌ಸಿ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಲು ಆಸ್ತಿ ಅಡಮಾನದ ಮೇಲೆ ₹20 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.

ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಸಾಲಕ್ಕೆ ಘಟಕ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಠ ₹2 ಲಕ್ಷ ಸಹಾಯಧನ ನೀಡಲಾಗುತ್ತದೆ. ಇದರೊಂದಿಗೆ ಆಧುನಿಕ ಮೊಬೈಲ್ ಕಿಚನ್ ಹಾಗೂ ಫುಡ್ ಕಿಯೋಸ್ಕ್ ಯೋಜನೆಯಡಿ ಸಂಚಾರಿ ಆಹಾರ ಉದ್ಯಮ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿದಾರರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರಬೇಕು ಮತ್ತು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ₹6 ಲಕ್ಷದ ಒಳಗೆ ಇರಬೇಕು. ವಯೋಮಿತಿ 18 ರಿಂದ 55 ವರ್ಷದ ಒಳಗಿರಬೇಕು. ಆಧಾರ್ ಕಾರ್ಡ್, ವಾಸದ ದೃಢೀಕರಣ ಪತ್ರ ಹಾಗೂ ಪಡಿತರ ಚೀಟಿ ಕಡ್ಡಾಯವಾಗಿದೆ. ಆಸಕ್ತರು ಸೆಪ್ಟೆಂಬರ್ 30 ರೊಳಗೆ www.kccdonline.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಅಚ್ಯುತರಾವ್ ಲೇಔಟ್‌ನಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.