ಶಿವಮೊಗ್ಗ: ನಗರದ ರಂಗಾಯಣದಲ್ಲಿ ಒಂದು ವರ್ಷದ ಅವಧಿಗೆ ರೆಪರ್ಟರಿಗೆ ನಟನೆ ಹಾಗೂ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಆಸಕ್ತ ಕಲಾವಿದರು ಮತ್ತು ತಂತ್ರಜ್ಞರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಬ್ಬರು ಮಹಿಳಾ ಕಲಾವಿದರು, ಇಬ್ಬರು ಪುರುಷ ಕಲಾವಿದರು ಹಾಗೂ ಒಬ್ಬರು ಸಂಗೀತ ಸಂಯೋಜಕರು, ಪಕ್ಕವಾದ್ಯಗಾರರ ಹುದ್ದೆಗೆ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಕಲಾವಿದರು ರಂಗಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜತೆಗೆ ಅಭಿನಯದ ಜವಾಬ್ದಾರಿಯನ್ನೂ ನಿರ್ವಹಿಸಬೇಕಿರುತ್ತದೆ. ಕಲಾವಿದರಿಗೆ ಮಾಸಿಕ ₹18,000 ಹಾಗೂ ಈ ಹಿಂದೆ ರಂಗಾಯಣಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವವರಿಗೆ ಮಾಸಿಕ ₹20,000 ಸಂಚಿತ ವೇತನ ನೀಡಲಾಗುವುದು. ಅರ್ಜಿ ಸಲ್ಲಿಸುವ ಕಲಾವಿದರ ವಯೋಮಿತಿ 18 ರಿಂದ 32 ವರ್ಷದೊಳಗಿರಬೇಕು (ದಿನಾಂಕ 29-09-2026ಕ್ಕೆ ಅನ್ವಯಿಸುವಂತೆ). ಪಾರಂಪರಿಕ ಕಲೆಯ ಕುಟುಂಬದಿಂದ ಬಂದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

ಇನ್ನು ಸಂಗೀತ ಸಂಯೋಜಕರು ಅಥವಾ ಪಕ್ಕವಾದ್ಯಗಾರ ಹುದ್ದೆಗೆ ಕನಿಷ್ಠ 10 ವರ್ಷಗಳ ರಂಗಾನುಭವ ಕಡ್ಡಾಯವಾಗಿದ್ದು, ಮಾಸಿಕ ₹25,000 ಸಂಚಿತ ವೇತನ ನಿಗದಿಪಡಿಸಲಾಗಿದೆ. ಈ ಹುದ್ದೆಗೆ ಯಾವುದೇ ವಯೋಮಿತಿ ಇರುವುದಿಲ್ಲ. ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 8ರ ಸಂಜೆ 5.30ರ ಒಳಗೆ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಹೆಲಿಪ್ಯಾಡ್ ಹಿಂಭಾಗ, ಶಿವಮೊಗ್ಗ-577201 ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು.
ಇ-ಮೇಲ್ admn.rangayanashivamogga@gmail.com ಅಥವಾ ರಂಗಾಯಣದ ಅಧಿಕೃತ ವೆಬ್ಸೈಟ್ https://rangayanashivamogga.karnataka.gov.in/ ಮೂಲಕವೂ ಗೂಗಲ್ ಫಾರ್ಮ್ ಡೌನ್ಲೋಡ್ ಮಾಡಿ ಆನ್ಲೈನ್ನಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-256353 ಅಥವಾ 7975229166 ಸಂಪರ್ಕಿಸಬಹುದು ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.