ಆನೆ ಮೇಲಿಂದ ಅಂಬಾರಿ ಕೆಳಗೆ ಬಿದ್ದ ಹಿನ್ನೆಲೆ ಶಿವಮೊಗ್ಗದಲ್ಲಿ ಪ್ರಾಯಶ್ಚಿತ್ತ ಹೋಮ ಶುರು, ಎಷ್ಟು ದಿನ ಪೂಜೆ?

ಶಿವಮೊಗ್ಗ: ವಿಜಯದಶಮಿಯ ದಸರಾ ಮೆರವಣಿಗೆ ವೇಳೆ ಅಂಬಾರಿ ಕೆಳಗೆ ಬಿದ್ದು ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಹಾನಿಯಾದ ಘಟನೆಯ ಹಿನ್ನೆಲೆ, ನಗರದ ಕೋಟೆ ಚಂಡಿಕಾಪರಮೇಶ್ವರಿ ಹಾಗೂ ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ 5 ದಿನಗಳ ಕಾಲ ಪ್ರಾಯಶ್ಚಿತ್ತ ಹೋಮ, ಹವನ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿವೆ. (ಈ ಸುದ್ದಿಯನ್ನು ಇನ್ನು 70 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ವಿಜಯದಶಮಿಯಂದು ಮೆರವಣಿಗೆಯಲ್ಲಿದ್ದ ಸೋಮಣ್ಣ ಆನೆ ಹದರಿ ಓಡಿದ ಪರಿಣಾಮ ಬೆಳ್ಳಿ ಅಂಬಾರಿ ಮತ್ತು ಚಾಮುಂಡೇಶ್ವರಿ ದೇವಿಯ ವಿಗ್ರಹ ಕೆಳಗೆ ಬಿದ್ದು ಹಾನಿಯಾಗಿತ್ತು. ಈ ಘಟನೆಯಿಂದ ಆತಂಕಗೊಂಡಿದ್ದ ಶಿವಮೊಗ್ಗದ ಗಣ್ಯರು, ಜನಪ್ರತಿನಿಧಿಗಳು ಹಾಗೂ ಪುರೋಹಿತರು ಶೃಂಗೇರಿ ಜಗದ್ಗುರುಗಳನ್ನು ಭೇಟಿ ಮಾಡಿ ಪರಿಹಾರ ಪಡೆದಿದ್ದರು. ಶೃಂಗೇರಿ ಶ್ರೀಗಳ ಮಾರ್ಗದರ್ಶನ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಪಂಡಿತರ ಸೂಚನೆಯಂತೆ ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಳ್ಳಲಾಗಿದೆ.

5-day-atonement-rituals-and-homas

ವಿವಿಧ ಧಾರ್ಮಿಕ ವಿಧಿವಿಧಾನ

ಐದು ದಿನಗಳ ಕಾಲ ವಿವಿಧ ಪೂಜೆ, ಹೋಮಗಳು ನಡೆಯಲಿವೆ. ನವೆಂಬರ್‌ 3ರಂದು ಮಹಾಗಣಪತಿ ಪೂಜೆ, ಮಹಾಸಂಕಲ್ಪ, ಪುಣ್ಯಾಹವಾಚನ, ಋತ್ವಿಗ್ವರಣೆ, ಕೂಷ್ಮಾಂಡ ಪ್ರಾಯಶ್ಚಿತ್ತ ಹೋಮ, ಷಣ್ಣಾರಿಕೇಳ ಅಷ್ಟದ್ರವ್ಯ ಮಹಾಗಣಪತಿ ಹೋಮ, ಪೂರ್ಣಾಹುತಿ, ಪ್ರಸಾದ ವಿನಿಯೋಗ, ದಶಾವರ್ತನ ಚಂಡಿಕಾ ಪಾರಾಯಣ ನಡೆಯಿತು.

ನವೆಂಬರ್‌ 4ರ ಬೆಳಗ್ಗೆ 9ರಿಂದ ಗಣಪತಿ ಪ್ರಾರ್ಥನೆ, ಸಂಕಲ್ಪ, ನವಚಂಡಿಕಾಹೋಮ, ಮಧ್ಯಾಹ್ನ 1ಕ್ಕೆ ಪೂರ್ಣಾಹುತಿ, ಬ್ರಾಹ್ಮಣ ಸುಹಾಸಿನೀ ಸಂತರ್ಪಣೆ ನಡೆಯಲಿದೆ. ನ.5ರ ಬೆಳಗ್ಗೆ 9.30ರಿಂದ ಗಣಪತಿ ಪ್ರಾರ್ಥನೆ, ಸಂಕಲ್ಪ, ರಾಕ್ಷೆಪ್ಪ ಅಘೋರಾಸ್ತ್ರ ಮಂತ್ರ ಜಪ, ಪ್ರಸಾದ ವಿನಿಯೋಗ, ಸಂಜೆ 7ಕ್ಕೆ ವಾಸ್ತು ರಾಕ್ಷೋಘ್ನ ಅಘೋರಾಸ್ತ್ರ ಹೋಮ, 9ಕ್ಕೆ ಪೂರ್ಣಾಹುತಿ, ನ.6ರ ಬೆಳಗ್ಗೆ 9.30ಕ್ಕೆ ದುರ್ಗಾಸೂಕ್ತ ಜಪಹೋಮ ಬಳಿಕ ಪೂರ್ಣಾಹುತಿ ನೆರವೇರಲಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಕೊನೆಯ ದಿನದಂದು ಆನೆ ಓಡಾಡಿದ ರಸ್ತೆಯಲ್ಲಿ ಹಿತ್ತಾಳೆಯ ಗಜ ವಾಹನ ಹಾಗೂ ಅಮ್ಮನವರ ತ್ರಿಶೂಲದೊಂದಿಗೆ ವೇದಗೋಷ್ಠಿ, ಮಂಗಳವಾದ್ಯ, ಛತ್ರಿ, ಚಾಮರಗಳೊಂದಿಗೆ ಸಂಚಾರ ನಡೆಸಲಿದೆ. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.