ಶಿವಮೊಗ್ಗ: ಭದ್ರಾ ನೀರಿಗಾಗಿ ಆಗ್ರಹಿಸಿ ಶಿವಮೊಗ್ಗದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಅಲ್ಲದೆ ಕೆಲವು ಟ್ರಾಕ್ಟರ್ಗಳನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದೆ. (ಈ ಸುದ್ದಿಯನ್ನು ಇನ್ನು 53 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಭದ್ರಾ ಜಲಾಶಯದ ನಾಲೆಗಳಿಗೆ ನಿರಂತರ 20 ದಿನ ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ಪ್ರತಭಟನೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇರಿಸಿಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರಿಂದ ಉಪವಾಸ ಸತ್ಯಾಗ್ರಹ
ಮಳೆ ಕೊರತೆಯಿಂದಾಗಿ ಅಡಿಕೆ ತೋಟಗಳು ಒಣಗುತ್ತಿವೆ. ಭದ್ರಾ ನಾಲೆಗಳಿಂದ ನೀರು ಹರಿಸದೆ ಇರುವುದರಿಂದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಹಾಗಾಗಿ ತಕ್ಷಣದಿಂದಲೇ ನಾಲೆಗಳಿಗೆ 20 ದಿನ ನಿರಂತರವಾಗಿ ನೀರು ಹರಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ನವೆಂಬರ್ 16ರಿಂದ ರೈತರು ಇಲ್ಲಿ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್
ಶಿವಮೊಗ್ಗದಲ್ಲಿ ಬುಧವಾರ ರೈತರು ಟ್ರಾಕ್ಟರ್ ರ್ಯಾಲಿ ನಡೆಸಿದ್ದರು. ಸಂಜೆ ವೇಳೆಗೆ ಆಕ್ರೋಶಗೊಂಡ ರೈತರು ಟ್ರಾಕ್ಟರ್ಗಳನ್ನು ವಿವಿಧ ರಸ್ತೆ, ಸರ್ಕಲ್ಗಳಿಗೆ ತಂದು ನಿಲ್ಲಿಸಿ ವಾಹನ ಸಂಚಾರ ತಡೆದಿದ್ದರು. ರೈತರ ಹೋರಾಟ ಮುಂದುವರೆದ ಹಿನ್ನೆಲೆ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ. ಡಿವೈಎಸ್ಪಿ, ವಿವಿಧ ಠಾಣೆಗಳ ಇನ್ಸ್ಪೆಕ್ಟ್ಗಳು, ಸಬ್ ಇನ್ಸ್ಪೆಕ್ಟರ್ಗಳು, ಡಿಎಆರ್ ಸಿಬ್ಬಂದಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.