ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 27 JUNE 2021
ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ನ ಡಿಸೈನ್ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಯಾಗಿದೆ. ಕಮಲದ ಮಾದರಿಯ ಡಿಸೈನ್ ಇರುವ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣದ ಡಿಸೈನ್ ವಿಚಾರ ರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚೆಯಾಗಿದೆ. ಈ ನಡುವೆ ಸಂಸದ ಬಿ.ವೈ.ರಾಘವೇಂದ್ರ ಅವರು ಡಿಸೈನ್ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದ ಡಿಸೈನ್ ವಿಚಾರ ಈಗ ದೆಹಲಿವರೆಗೂ ತಲುಪಿದೆ.
ದೆಹಲಿಗೆ ತಲುಪಿದ ಡಿಸೈನ್ ವಿಚಾರ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶಿವಮೊಗ್ಗ ಭೇಟಿ ವೇಳೆ ಟರ್ಮಿನಲ್ ಡಿಸೈನ್ ಅನಾವರಣ ಮಾಡಲಾಯಿತು. ಟರ್ಮಿನಲ್ನ ಮೇಲ್ಭಾಗದಲ್ಲಿ ಕಮಲದ ಮಾದರಿಯನ್ನು ರೂಪಿಸಲಾಗಿದೆ. ಇದಕ್ಕೆ ಜಿಲ್ಲಾ ಕಾಂಗ್ರೆಸ್ ಅಕ್ಷೇಪ ವ್ಯಕ್ತಪಡಿಸಿತು.
ಕಮಲದ ಮಾದರಿಯ ಡಿಸೈನ್ ಬದಲಾಯಿಸದೆ ಇದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಎಚ್ಚರಿಕೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣದ ಬ್ಲೂಪ್ರಿಂಟ್ ಬದಲಾಯಿಸದಿದ್ದರೆ ಕಾನೂನು ಹೋರಾಟ
ಕಾಂಗ್ರೆಸ್ ಪಕ್ಷದ ವಕ್ತಾರ, ಹಿರಿಯ ನ್ಯಾಯವಾದಿ ಬ್ರಿಜೇಶ್ ಕಾಳಪ್ಪ ಅವರು ಟ್ವೀಟ್ ಮಾಡಿದ ಬಳಿಕ, ವಿವಾದ ದೆಹಲಿವರೆಗೂ ತಲುಪಿತು. ‘ರಾಜಕೀಯ ಪಕ್ಷದ ಚಿಹ್ನೆಯ ಪ್ರಚಾರಕ್ಕೆ ಸಾರ್ವಜನಿಕ ಹಣ ಮತ್ತು ಜಾಗ ಬಳಕೆ ಮಾಡುವುದು ಸರಿಯಲ್ಲ. ಈ ಹಿಂದಿನ ಪ್ರಕರಣಗಳಲ್ಲಿ ಹೈಕೋರ್ಟ್ ಹಾಗೂ ಚುನಾವಣಾ ಆಯೋಗ ಇದನ್ನು ವಿರೋಧಿಸಿವೆ. ಹೀಗಾಗಿ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸವನ್ನು ಬದಲಿಸಬೇಕು’ ಎಂದು ಕಾಂಗ್ರೆಸ್ ಬೆಂಗಳೂರು ವಿಭಾಗ ಮಾಡಿದ್ದ ಟ್ವೀಟನ್ನು ಬ್ರಿಜೇಶ್ ಕಾಳಪ್ಪ ರಿಟ್ವೀಟ್ ಮಾಡಿಕೊಂಡಿದ್ದರು. ಬಳಿಕ ಡಿಸೈನ್ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಗೆ ನಡೆಯಿತು.
ಡಿಸೈನ್ ಬದಲಾವಣೆ ಅಸಾಧ್ಯ
ರಾಷ್ಟ್ರೀಯ ವಾಹಿನಿಗಳಲ್ಲಿ ವಿಮಾನ ನಿಲ್ದಾಣ ಡಿಸೈನ್ ಕುರಿತು ಚರ್ಚೆಯಾಗುತ್ತಿದ್ದಂತೆ ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ. ‘ವಿಮಾನ ನಿಲ್ದಾಣದ ಡಿಸೈನ್ ಕಮಲದ ರೀತಿಯಲ್ಲಿ ಕಾಣುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಮಗ್ಯಾರಿಗೂ ಆ ರೀತಿ ಕಾಣುತ್ತಿಲ್ಲ. ಎಲೆಗಳನ್ನು ಜೋಡಿಸಿರುವ ಮಾದರಿಯ ಡಿಸೈನ್ ಮಾಡಿ ಕೊಟ್ಟಿದ್ದಾರೆ. ಇದಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರ ಕೂಡ ಒಪ್ಪಿಗೆ ಸೂಚಿಸಿದೆ. ಹಾಗಾಗಿ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
‘ಈ ಬಗ್ಗೆ ವಿವಾದ ಹುಟ್ಟುಹಾಕುತ್ತಿರವವರು ತಾವಂತೂ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ದೇಶದ 300 ರಿಂದ 400 ರಾಷ್ಟ್ರೀಯ ಸಂಸ್ಥೆಗಳಿಗೆ ನೆಹರೂ , ಇಂದಿರಾ ಗಾಂಧಿ ಅವರ ಮನೆತನದವರ ಹೆಸರನ್ನು ಇಡಲಾಗಿದೆ. ಇತ್ತೀಚೆಗೆ ಸಿದ್ದರಾಮಯ್ಯ ಅವರ ಸರ್ಕಾರ ಇಂದಿರಾ ಗಾಂಧಿ ಅವರ ಹೆಸರಲ್ಲಿ ಕ್ಯಾಂಟೀನ್ ಶುರು ಮಾಡಿದರು. ಇದಕ್ಕೆ ನಾವ್ಯಾರು ಆಕ್ಷೇಪ ವ್ಯಕ್ತಪಡಿಸಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು’ ಎಂದು ರಾಘವೇಂದ್ರ ಹೇಳಿದ್ದಾರೆ.
ಕಮಲ ಮಹಾಲಕ್ಷ್ಮಿಯ ಚಿನ್ಹೆ
ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಕಾಂಗ್ರೆಸ್ ಮುಖಂಡರ ಆಕ್ಷೇಪಕ್ಕೆ ತಿರುಗೇಟು ನೀಡಿದ್ದಾರೆ. ಕಮಲವನ್ನು ಬಿಜೆಪಿಯೇನು ಗುತ್ತಿಗೆ ಪಡೆದಿಲ್ಲ. ಕಮಲ ಅನ್ನೋದು ಮಹಾಲಕ್ಷ್ಮೀಯ ಸಂಕೇತ. ಆರೋಪ ಮಾಡುತ್ತಿರುವ ಕಾಂಗ್ರೆಸಿಗರು ತಮ್ಮ ಮನೆಯಲ್ಲಿ ತಾಯಿಯನ್ನೋ, ಹೆಂಡತಿಯನ್ನೋ, ಸಹೋದರಿಯನ್ನೋ ವಿಚಾರಿಸಿದೆ ಕಮಲದ ಮಹತ್ವ ಗೊತ್ತಾಗಲಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೆಹಲಿಯಲ್ಲಿ ಲೋಟಸ್ ಮಹಲ್ ಕಟ್ಟಿಸಿದ್ದರು. ಈಗ ಅದನ್ನು ಒಡೆದ ಹಾಕಲು ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
2008ರಲ್ಲಿ ಪ್ರಾರಂಭವಾಗಿದ್ದ ಕಾಮಗಾರಿ
2008ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲಾಗಿತ್ತು. ಗುತ್ತಿಗೆದಾರರ ಸಮಸ್ಯೆಯಿಂದಾಗಿ ಕಾಮಗಾರಿ ನಿಂತು ಹೋಗಿತ್ತು. 384 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422