ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಯಾಲಿಟಿ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಹಾಗೂ ಕ್ಯಾನ್ಸರ್ ಸರ್ವೈವರ್ಸ್ ಡೇ ಅಂಗವಾಗಿ ರೋಗಿಗಳಿಗೆ ಅನುಕೂಲವಾಗುವಂತೆ ಸ್ತನ ಕ್ಯಾನ್ಸರ್ ತಪಾಸಣಾ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಲಾಗಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ ಶರ್ಮಾ ತಪಾಸಣಾ ಪ್ಯಾಕೇಜ್ ಬಿಡುಗಡೆ ಮಾಡಿ ಮಾತನಾಡಿ, “₹1999ರ ಈ ಪ್ಯಾಕೇಜ್ನಲ್ಲಿ ಕ್ಯಾನ್ಸರ್ ಆರಂಭಿಕ ಪತ್ತೆಗೆ ಅಗತ್ಯವಿರುವ ಎಲ್ಲಾ ಪರೀಕ್ಷೆಗಳು ಲಭ್ಯವಿವೆ. ಜೊತೆಗೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೂ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಿಬ್ಬಂದಿ ತಮ್ಮ ಕುಟುಂಬಸ್ಥರು ಹಾಗೂ ನೆರೆಹೊರೆಯವರನ್ನು ಈ ಶಿಬಿರಕ್ಕೆ ಕರೆದುಕೊಂಡು ಬರಬೇಕು” ಎಂದರು.

ಡಾಕ್ಟರ್ಗಳು ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್
ಡಾ. ಅಪರ್ಣ ಶ್ರೀವತ್ಸ, ಮೆಡಿಕಲ್ ಆಂಕೊಲಾಜಿಸ್ಟ್
- ಮುಂದಿನ 10 ವರ್ಷಗಳಲ್ಲಿ ಕ್ಯಾನ್ಸರ್ ಕಾಯಿಲೆಯು ಹೃದಯ ಸಂಬಂಧಿ ಕಾಯಿಲೆಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಪ್ರಾಣಹಾನಿ ಉಂಟುಮಾಡುವ ಪ್ರಮುಖ ಕಾಯಿಲೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪ್ರತಿಯೊಬ್ಬರೂ ಮುಂಜಾಗ್ರತೆ ಹಾಗೂ ಸ್ಕ್ರೀನಿಂಗ್ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.
- ಹಿಂದೆ 40 ವರ್ಷ ದಾಟಿದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಸ್ತನ ಕ್ಯಾನ್ಸರ್, ಈಗ 30 ವರ್ಷದೊಳಗಿನ ಯುವತಿಯರಲ್ಲೂ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
- ಹೆಣ್ಣುಮಕ್ಕಳಿಗೆ ಪ್ರೌಢಾವಸ್ಥೆಯಲ್ಲೇ ಸ್ತನ ಆರೋಗ್ಯದ ಕುರಿತು ಅರಿವು ಮೂಡಿಸಬೇಕು. ಶಾಲಾ ಪಠ್ಯಕ್ರಮದಲ್ಲೇ ಸ್ತನ ಸ್ವಯಂ ತಪಾಸಣೆ ವಿಷಯವನ್ನು ಅಳವಡಿಸುವುದು ಸೂಕ್ತ.
- ಮಹಿಳೆಯರು ಹಬ್ಬ-ಹರಿದಿನಗಳಲ್ಲಿ ತೋರುವ ಆಸಕ್ತಿಯನ್ನು ತಮ್ಮ ಆರೋಗ್ಯದ ಕಡೆಗೂ ನೀಡಬೇಕು. ಹೆಚ್ಚಾಗುತ್ತಿರುವ ದೇಹದ ತೂಕ ಕ್ಯಾನ್ಸರ್ ಕಾರಕ ರಾಸಾಯನಿಕಗಳ ಬಿಡುಗಡೆಗೆ ಕಾರಣವಾಗುವುದರಿಂದ ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಅಥವಾ ವಾಕಿಂಗ್ ಮಾಡಲು ಸಮಯ ಮೀಸಲಿಡಬೇಕು.
ಕ್ಯಾನ್ಸರ್ ಕೇವಲ ಒಂದು ಕಾಯಿಲೆಯಲ್ಲ, ಅದೊಂದು ಸುದೀರ್ಘ ವೈದ್ಯಕೀಯ ಹೋರಾಟ. ರೋಗ ಪತ್ತೆಯಾದ ದಿನದಿಂದಲೇ ಸರ್ವೈವರ್ಶಿಪ್ ಪ್ರಕ್ರಿಯೆ ಆರಂಭವಾಗುತ್ತದೆ. ಬಯಾಪ್ಸಿ, ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಹಾಗೂ ರೇಡಿಯೇಷನ್ ಚಿಕಿತ್ಸೆಗಳ ನಂತರದ ನಿರಂತರ ತಪಾಸಣೆಗಳು ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಂದು ಒಪಿಡಿ ಭೇಟಿಯೂ ಇದರ ಭಾಗವಾಗಿರುತ್ತದೆ.
– ಡಾ. ವಿವೇಕ್ ಎಂ.ಎ., ಸರ್ಜಿಕಲ್ ಆಂಕೊಲಾಜಿಸ್ಟ್
1980ರ ದಶಕದಿಂದೀಚೆಗೆ ಮಹಿಳಾ ಆರೋಗ್ಯ, ಲಸಿಕೆ ಮತ್ತು ಕುಟುಂಬ ಕಲ್ಯಾಣ ಯೋಜನೆಗಳಲ್ಲಿ ಆಗಿರುವ ಮಹತ್ವದ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು.
– ಡಾ. ಭಾರತಿ ದೇವಿ, ಹಿರಿಯ ವೈದ್ಯೆ
ಕಾರ್ಯಕ್ರಮದಲ್ಲಿ ರೇಡಿಯೇಷನ್ ಆಂಕೊಲಾಜಿಸ್ಟ್ ಡಾ. ರವಿ ನಡಹಳ್ಳಿ, ಡಾ. ಸುದರ್ಶನ್ ಗುಪ್ತ ಹಾಗೂ ಆಸ್ಪತ್ರೆಯ ಹಿರಿಯ ಮಾರುಕಟ್ಟೆ ವ್ಯವಸ್ಥಾಪಕ ಶೈಲೇಶ್ ಎಸ್.ಎನ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.