ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 22 FEBRUARY 2021
ರಾತ್ರಿ ಸುರಿದ ಭಾರಿ ಮಳೆಗೆ ಚಾನಲ್ನ ತಡೆಗೋಡೆ ಕುಸಿದು, 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ನೀರನ್ನು ಮನೆಯಿಂದ ಹೊರಗೆ ಹಾಕುತ್ತಲೇ ಜನರು ರಾತ್ರಿ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ್ಯಾರು ತಮ್ಮ ನೆರವಿಗೆ ಬರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಗಾಯ್ತು ಘಟನೆ?
ಶಿವಮೊಗ್ಗದ ವಿದ್ಯಾನಗರದ ಸುಭಾಷ್ ನಗರದಲ್ಲಿ ಚಾನಲ್ನ ತಡೆಗೋಡೆ ಕುಸಿದಿದೆ. ರಾತ್ರಿ 1 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಕಾಂಪೌಂಡ್ ಪಕ್ಕದಲ್ಲೇ ಇರುವ ಸುಮಾರು 30 ಮನೆಗಳಿಗೆ ನೀರು ನುಗ್ಗಿದೆ.
ರಾತ್ರಿ ಇಡೀ ಜಾಗರಣೆ
ನೀರು ನುಗ್ಗುತ್ತಿದ್ದಂತೆ ಸ್ಥಳೀಯರು ಆತಂಕಗೊಂಡಿದ್ದಾರೆ. ಮನೆಯಿಂದ ನೀರು ಹೊರಗೆ ಹಾಕಲು ಹರಸಾಹಸ ಮಾಡಿದ್ದಾರೆ.
ದಿಢೀರ್ ನೀರು ನುಗ್ಗಿದ್ದರಿಂದ ಮನೆಯೊಳಗಿನ ವಸ್ತುಗಳು ಜಲಾವೃತವಾಗಿದೆ. ದಿನಸಿ, ಬಟ್ಟೆಗಳು ಸೇರಿದಂತೆ ಹಲವು ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಚಾನೆಲ್ನಿಂದ ಮತ್ತಷ್ಟು ನೀರು ಮನೆಗಳಿಗೆ ನುಗ್ಗದಂತೆ ತಡೆಯಲು, ಸ್ಥಳೀಯರೆ ಗೋಡೆಗೆ ಕಲ್ಲುಗಳನ್ನು ಅಡ್ಡಲಾಗಿ ಇರಿಸಿ, ನೀರಿನ ರಭಸ ತಡೆಯುವಲ್ಲಿ ಸಫಲರಾಗಿದ್ದಾರೆ.
ಯಾರೊಬ್ಬರೂ ಫೋನ್ ರಿಸೀವ್ ಮಾಡ್ಲಿಲ್ಲ
ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಸೇರಿದಂತೆ ಹಲವು ಕಡೆಗೆ ಕರೆ ಮಾಡಿದ್ದಾರೆ. ಆದರೆ ಯಾರೊಬ್ಬರೂ ಸ್ಪಂದಿಸಲಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಅಸಹಾಯಕರಾದರು. ಜನರ ರಕ್ಷಣೆ ಬಗ್ಗೆ ಮಾತ್ರ ಗಮನ ಹರಿಸಿದರು ಅನ್ನುತ್ತಾರೆ ಸ್ಥಳೀಯರು.
ಏನಿದು ಚಾನಲ್? ಗೋಡೆ ಕುಸಿಯಲು ಕಾರಣವೇನು?
ಸಂತೆ ಕಡೂರಿನಿಂದ ಪುರಲೆವರೆಗೂ ಚಾನೆಲ್ ಇದೆ. ಇತ್ತೀಚೆಗಷ್ಟೆ ಈ ಚಾನೆಲ್ನ ದುರಸ್ಥಿ ಕಾರ್ಯ ನಡೆಯಿತು. ಎತ್ತರದ ಕಾಂಪೌಂಡ್ ನಿರ್ಮಿಸಲಾಗಿದೆ. ಕಾಂಪೌಂಡ್ ಗೋಡೆಯ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಶಂಕೆ ಇದ್ದು, ನಿನ್ನೆ ಸುರಿದ ಮಳೆಗೆ ಕುಸಿದು ಬಿದ್ದಿದೆ. ಇದರಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಈತನಕ ಬಂದಿಲ್ಲ ಅಧಿಕಾರಿಗಳು
ಘಟನೆ ನಡೆದು ಇಷ್ಟು ಹೊತ್ತಾದರೂ ಈತನಕ ಯಾರೊಬ್ಬರು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ದಿನಸಿ ಸೇರಿದಂತೆ ಹಲವು ವಸ್ತುಗಳು ಕೊಚ್ಚಿ ಹೋಗಿರುವುದರಿಂದ, ಬೆಳಗಿನ ತಿಂಡಿಗೂ ಜನರು ಸಂಕಷ್ಟ ಪಡುವಂತಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422