ಶಿವಮೊಗ್ಗ: ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ನಡೆಸಲಾಗುವ ಕ್ಲಾಟ್ (CLAT), ಐಲೆಟ್ (AILET) ಹಾಗೂ ಎನ್‌ಎಲ್‌ಎಸ್‌ಎಟಿ (NLSAT) ಪರೀಕ್ಷೆಗಳಿಗೆ ಇದೇ ಮೊದಲ ಬಾರಿ ಸ್ವಾಚನ್ ಸೆಂಟರ್ ಫಾರ್ ಇನ್ನೋವೇಟಿವ್ ಟ್ರೈನಿಂಗ್, ಅವೇರ್ನೆಸ್ ಅಂಡ್ ರಿಸರ್ಚ್ (SCITAR) ಸಂಸ್ಥೆ ವತಿಯಿಂದ ವಿಶೇಷ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಗೆ ವಿದ್ಯಾರ್ಥಿಗಳ ಆಯ್ಕೆ ಮಾಡಲು ಜುಲೈ 12ರಂದು ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವಕೀಲೆ ಸಾಧ್ವಿ ಶ್ರೀಕಾಂತ್ ತಿಳಿಸಿದರು. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಧ್ವಿ ಶ್ರೀಕಾಂತ್, ಪಿಯುಸಿ ಮುಗಿದ ಮೇಲೆ ವಿದ್ಯಾರ್ಥಿಗಳು ಭವಿಷ್ಯದ ಕೋರ್ಸ್ ಕುರಿತು ಗೊಂದಲದಲ್ಲಿರುತ್ತಾರೆ. ವಿಜ್ಞಾನ ವಿಷಯದಲ್ಲಿ ಮುಂದುವರೆದರಷ್ಟೆ ಭವಿಷ್ಯ ರೂಪಿಸಿಕೊಳ್ಳಬಹುದು ಕಲ್ಪನೆ ಇರುತ್ತದೆ. ಆದರೆ ಕಾನೂನು ಕ್ಷೇತ್ರದಲ್ಲಿಯು ಭವಿಷ್ಯ ಕಟ್ಟಿಕೊಳ್ಳಲು ಉತ್ತಮ ಅವಕಾಶವಿದೆ ಎಂದರು.

ದೇಶದಲ್ಲಿ 27 ಕಾನೂನು ವಿಶ್ವವಿದ್ಯಾಲಯಗಳಿವೆ. ಕಾನೂನು ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ಕ್ಲಾಟ್, ಐಲೆಟ್, ಎನ್‌ಎಲ್‌ಎಸ್‌ಎಟಿ ಪರೀಕ್ಷೆ ನಡೆಯಲಿದೆ. ಪಿಯುಸಿ ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನು ಎದುರಿಸಬಹುದು. ಆದ್ದರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳ ಕುರಿತು ತರಬೇತಿ ಆಯೋಜಿಸಲಾಗಿದೆ. ಈ ಮೂರು ಪರೀಕ್ಷೆಗಳಿಗೆ ಏನೆಲ್ಲ ಓದಬೇಕು ಮತ್ತು ತಿಳಿದುಕೊಳ್ಳಬೇಕು ಎಂದು ಅರಿವು ಮೂಡಿಸಲು ಇದೇ ಮೊದಲ ಬಾರಿ ತರಬೇತಿ ಆಯೋಜಿಸಲಾಗಿದೆ ಎಂದು ಸಾಧ್ವಿ ಶ್ರೀಕಾಂತ್ ಹೇಳಿದರು.
ಅರ್ಹತೆ ಮತ್ತು ಪರೀಕ್ಷೆಯ ವಿವರ
ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಯಾವುದೇ ವಿಭಾಗದ ವಿದ್ಯಾರ್ಥಿಗಳು ಹಾಗೂ ಭವಿಷ್ಯದಲ್ಲಿ ಕಾನೂನು ಪ್ರವೇಶ ಪರೀಕ್ಷೆ ಬರೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತರಬೇತಿಗೆ ಹಾಜರಾಗಬಹುದು. ತರಬೇತಿಗೆ ಹಾಜರಾಗುವ ಮೊದಲು ಪ್ರವೇಶ ಪರೀಕ್ಷೆ ಎದುರಿಸಬೇಕು. ಜುಲೈ 12ರ ಬೆಳಿಗ್ಗೆ 10:30ಕ್ಕೆ ನಗರದ ಡಿ.ವಿ.ಎಸ್. ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಬೆಳಿಗ್ಗೆ 10 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು ಎಂದರು.
ಒಂದು ಗಂಟೆ ಅವಧಿಯ ಈ ಪರೀಕ್ಷೆ ಪ್ರಶ್ನೆಪತ್ರಿಕೆಯು ಇಂಗ್ಲಿಷ್, ಕ್ವಾಂಟಿಟೇಟಿವ್ ರೀಸನಿಂಗ್ ಮತ್ತು ಪ್ರಚಲಿತ ವಿದ್ಯಮಾನ ವಿಷಯಗಳ 60 ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿರುತ್ತದೆ. ಪರೀಕ್ಷೆಗೆ ₹100 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜು ಗುರುತಿನ ಚೀಟಿ ಹಾಗೂ ಸ್ವಂತ ಲೇಖನ ಸಾಮಗ್ರಿಗಳನ್ನು ತರುವುದು ಕಡ್ಡಾಯ. ಈ ಸ್ಕ್ರೀನಿಂಗ್ ಪರೀಕ್ಷೆಯ ಮೂಲಕ ಆಯ್ಕೆಯಾಗುವವರಿಗೆ ಕಾನೂನು ತಜ್ಞರಿಂದ ಉನ್ನತ ತರಬೇತಿ ಹಾಗೂ ಅಣಕು ಪರೀಕ್ಷೆಗಳ ಮೂಲಕ ವಿಶೇಷ ತರಬೇತಿ ನೀಡಲಾಗುತ್ತದೆ. ಸೀಟುಗಳು ಸೀಮಿತವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 79753 89195, 97393 83734 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಟಾರ್ ಸಂಸ್ಥೆ ಮುಖ್ಯಸ್ಥ ಚಂದ್ರಕಾಂತ್ ಹಸಗೋಡು, ಸ್ವರ್ಣಲತಾ, ರೋಟರಿ ಸಂಸ್ಥೆ ಮಾಜಿ ಸಹಾಯಕ ಗೌವರ್‌ನರ್ ಡಾ. ಗುಡದಪ್ಪ ಕಸವಿ, ಜಿ.ವಿಜಯ್ ಕುಮಾರ್ ಇದ್ದರು.