ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021
ಶಿವಮೊಗ್ಗದಲ್ಲಿ ಇವತ್ತು ಬಟ್ಟೆ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ನಗರದಾದ್ಯಂತ ಇರುವ ಇನ್ನೂರಕ್ಕೂ ಹೆಚ್ಚು ಜವಳಿ ಮಳಿಗೆಗಳನ್ನು ಮಧ್ಯಾಹ್ನದವರೆಗೆ ಬಂದ್ ಮಾಡಿ, ಪ್ರತಿಭಟನೆ ನಡೆಸಲು ಮಾಲೀಕರು ನಿರ್ಧರಿಸಿದ್ದಾರೆ.
ಬಟ್ಟೆಗಳ ಮೇಲೆ ಶೇ. 5ರಿಂದ 12ಕ್ಕೆ ಜಿಎಸ್‌ಟಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಜವಳಿ ವರ್ತಕರು ಡಿ.16ರಂದು ಮಧ್ಯಾಹ್ನದವರೆಗೆ ಅಂಗಡಿಗಳನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಜವಳಿ ವರ್ತಕರ ಸಂಘದ ಅಧ್ಯಕ್ಷ ಟಿ.ಆರ್.ವೆಂಕಟೇಶಮೂರ್ತಿ ತಿಳಿಸಿದರು.
2022ರ ಜ.1ರಿಂದ ಕೇಂದ್ರ ಸರ್ಕಾರ ಜನಸಾಮಾನ್ಯರ ಅಗತ್ಯ ವಸ್ತು ಬಟ್ಟೆಗಳ ಮೇಲೆ ಶೇ.12 ಜಿಎಸ್‌ಟಿ ವಿಧಿಸಲು ನಿರ್ಧರಿಸಿದೆ. ಅಗತ್ಯ ವಸ್ತುಗಳ ಪಟ್ಟಿಯಲ್ಲಿರುವ ಜವಳಿ ಮೇಲೆ ಜಿಎಸ್‌ಟಿ ಹೆಚ್ಚಿಸಿರುವುದು ಅನ್ಯಾಯದ ಪರಮಾವಧಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದೆರಡು ವರ್ಷ ಲಾಕ್‌ಡೌನ್‌ನಿಂದ ಜವಳಿ ವರ್ತಕರು ವ್ಯಾಪಾರವಿಲ್ಲದೇ ಹೈರಾಣಾಗಿದ್ದಾರೆ. ಬದುಕು ದುಸ್ತರವಾಗಿದೆ. ಇಂತಹ ಸಂದರ್ಭ ಗಾಯದ ಮೇಲೆ ಬರೆ ಎಳೆದಂತೆ ಜಿಎಸ್‌ಟಿ ಏರಿಕೆ ಮಾಡುತ್ತಿರುವುದು ಸರಿಯಲ್ಲ. ಜಿಎಸ್‌ಟಿ ಏರಿಕೆಯಿಂದ ತೆರಿಗೆ ತಪ್ಪಿಸುವ ಅನ್ಯ ಮಾರ್ಗಗಳಿಗೂ ದಾರಿಯಾಗಲಿದೆ. ತೆರಿಗೆ ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಪಿ.ವಿ. ಪ್ರಭಾಕರ್ ಮಾತನಾಡಿ, ಸಂಘದ ಸದಸ್ಯತ್ವ ಪಡೆದಿರುವ ನಗರದ 200 ಜವಳಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ಮೆರವಣಿಗೆ ರಾಮಣ್ಣ ಶ್ರೇಷ್ಠಿಪಾರ್ಕ್‌ನಿಂದ ಗಾಂಧಿಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ನೀಡಲಾಗುವುದು ಎಂದರು.
ಅನಿಲ್‌ಕುಮಾರ್ ಶೆಟ್ಟಿ, ಭಾಸ್ಕರ್, ಪ್ರಮೋದ್, ಹರೀಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200