ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ದೋಷಯುಕ್ತ ಮೊಬೈಲ್ ಫೋನ್ ಮಾರಾಟ ಮಾಡಿ ಸೇವಾ ನ್ಯೂನತೆ ಎಸಗಿದ ಕಂಪನಿ ಹಾಗೂ ಮಾರಾಟಗಾರರಿಗೆ, ಮೊಬೈಲ್‌ನ ಹಣವನ್ನು ಬಡ್ಡಿ ಸಮೇತ ಗ್ರಾಹಕನಿಗೆ ಮರುಪಾವತಿಸಲು ಮತ್ತು ಒಟ್ಟು ₹15,000 ಪರಿಹಾರ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ನೀಡಿದೆ.

ಶಿವಮೊಗ್ಗದ ಗೋಪಾಳ ನಿವಾಸಿ ಮಂಜುನಾಥ ಜೆ.ವಿ. ಅವರು ನಗರದ ನೆಹರು ರಸ್ತೆಯ ಮೊಬೈಲ್ ಅಂಗಡಿಯಲ್ಲಿ ₹1,650 ಪಾವತಿಸಿ ಮೊಬೈಲ್ ಖರೀದಿಸಿದ್ದರು. ಖರೀದಿಸಿದ ಒಂದು ತಿಂಗಳೊಳಗೆ ಮೊಬೈಲ್‌ನಲ್ಲಿ ದೋಷ ಕಂಡುಬಂದಿದ್ದು, ಮಾರಾಟಗಾರರು ಚಾರ್ಜರ್ ಬದಲಾಯಿಸಿಕೊಟ್ಟಿದ್ದರು. ಆದರೆ ಸಮಸ್ಯೆ ಬಗೆಹರಿಯಲಿಲ್ಲ. ಕಳೆದ ಫೆಬ್ರವರಿ 27 ರಂದು ಪತ್ರ ಬರೆದು ಮನವಿ ಮಾಡಿದರೂ ಮೊಬೈಲ್ ಸರಿಪಡಿಸದೆ ನಿರ್ಲಕ್ಷ್ಯ ವಹಿಸಿದ್ದರು.
ನೊಂದ ಗ್ರಾಹಕ ಮೊಬೈಲ್ ಕಂಪನಿ ಹಾಗೂ ಸ್ಥಳೀಯ ಮಾರಾಟಗಾರರ ವಿರುದ್ಧ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗ ನೋಟಿಸ್ ಜಾರಿ ಮಾಡಿದರೂ ಮೊಬೈಲ್ ಕಂಪನಿ ಮತ್ತು ಮಾರಾಟಗಾರರು ಹಾಜರಾಗದ ಹಿನ್ನೆಲೆ ಏಕಪಕ್ಷೀಯ ವಿಚಾರಣೆ ನಡೆಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠ, ಸೇವಾ ನ್ಯೂನತೆಯನ್ನು ಎತ್ತಿಹಿಡಿದಿದೆ. ಮೊಬೈಲ್‌ನ ಮೂಲ ಬೆಲೆ ₹1,650 ಗಳನ್ನು ಫೆಬ್ರವರಿ 27 ರಂದು ಅಥವಾ ಅಂದಿನಿಂದ ವಾರ್ಷಿಕ ಶೇ. 7ರ ಬಡ್ಡಿ ಸೇರಿಸಿ 45 ದಿನಗಳೊಳಗೆ ದೂರುದಾರರಿಗೆ ಮರುಪಾವತಿಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಗ್ರಾಹಕರಿಗೆ ಉಂಟಾದ ಮಾನಸಿಕ ವೇದನೆಗಾಗಿ ₹5,000 ಪರಿಹಾರ ನೀಡಬೇಕು. ದೂರಿನ ಖರ್ಚು-ವೆಚ್ಚವಾಗಿ ₹10,000 ನೀಡಬೇಕು. 45 ದಿನಗಳೊಳಗೆ ಈ ಪರಿಹಾರ ಮೊತ್ತವನ್ನು ಪಾವತಿಸದಿದ್ದರೆ ವಾರ್ಷಿಕ ಶೇ.10ರ ಬಡ್ಡಿಯನ್ನು ಸೇರಿಸಿ ನೀಡಬೇಕು. ಆದೇಶವಾದ 45 ದಿನಗಳೊಳಗೆ ಮೊಬೈಲ್ ಫೋನ್ ಅನ್ನು ಗ್ರಾಹಕನಿಗೆ ಹಸ್ತಾಂತರಿಸಬೇಕು ಎಂದು ಆದೇಶಿಸಲಾಗಿದೆ.