SHIVAMOGGA LIVE | 26 JULY 2023
SHIMOGA : ಸ್ಮಾರ್ಟ್ ಸಿಟಿ ಯೋಜನೆಯ ಭೂಗತ ಕೇಬಲ್ ಕಾಮಗಾರಿ ವಿರುದ್ಧ ಮಹಾನಗರ ಪಾಲಿಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷಭೇದ ಮರೆತು ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಜನ, ಜಾನುವಾರುಗಳ ಜೀವದ ಜೊತೆ ಚೆಲ್ಲಾಟ ಆಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಿವಮೊಗ್ಗ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಯುಜಿ ಕೇಬಲ್ ಕಾಮಗಾರಿ ವಿರುದ್ಧ ಪಾಲಿಕೆ ಸದಸ್ಯರು ಗರಂ ಆದರು. ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಯುಜಿ ಕೇಬಲ್ ಕಾಮಗಾರಿ ಫೋಟೊಗಳನ್ನು ಪ್ರದರ್ಶಿಸಿ ವಿಷಯ ಪ್ರಸ್ತಾಪಿಸಿದರು. ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡುವ ವಾರ್ಡ್‌ಗಳ ಸರ್ವ ಪಕ್ಷದ ಪಾಲಿಕೆ ಸದಸ್ಯರು ಧ್ವನಿಗೂಡಿಸಿದರು.
ಯಾರೆಲ್ಲ ಏನೇನು ಹೇಳಿದರು?
ಸ್ಮಾರ್ಟ್ ಸಿಟಿ ಯೋಜನೆಯ ಯುಜಿ ಕೇಬಲ್ ಕಾಮಗಾರಿ ಜನರಲ್ಲಿ ತೀವ್ರ ಆತಂಕ ಮೂಡಿಸುತ್ತಿದೆ. ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಜೀವ ಭಯದಲ್ಲಿದ್ದಾರೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸದೆ ಇದ್ದರೆ ಮುಂದೆ ದೊಡ್ಡ ಸಮಸ್ಯೆಯಾಗಲಿದೆ.ರೇಖಾ ರಂಗನಾಥ್, ಪಾಲಿಕೆ ವಿರೋಧ ಪಕ್ಷದ ನಾಯಕಿ
ಫುಟ್ ಪಾತ್‌ಗಳಲ್ಲಿ ಶಾರ್ಟ್ ಸರ್ಕಿಟ್ ಆಗುತ್ತಿದೆ. ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಹಾನಿಯಾಗಿವೆ. ಈ ಕುರಿತು ಮೆಸ್ಕಾಂಗೆ ವಿಚಾರಿಸಿದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ಮೇಲೆ ಹೊಣೆ ಹೊರಿಸುತ್ತಾರೆ. ಸ್ಮಾರ್ಟ್ ಸಿಟಿಯವರು ಮೆಸ್ಕಾಂ ವಿರುದ್ಧ ಆರೋಪಿಸುತ್ತಾರೆ. ಒಂದು ಮೀಟರ್ ಕೆಳಗೆ ಭೂಗತವಾಗಿ ಕೇಬಲ್ ಅಳವಡಿಸಬೇಕು. ಆದರೆ ಕೇವಲ ಎರಡು ಅಡಿಗೆ ಕೇಬಲ್ ಹಾಕಲಾಗಿದೆ.ನಾಗರಾಜ ಕಂಕಾರಿ, ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯ
ಭೂಗತ ಕೇಬಲ್‌ನಿಂದ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಆದ್ದರಿಂದ ವಿದ್ಯುತ್ ಕಂಬಗಳನ್ನು ತೆರವು ಮಾಡಲಾಗುತ್ತದೆ ಎಂದಿದ್ದರು. ಈಗ ಫೀಡರ್ ಬಾಕ್ಸ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಯುಜಿ ಕೇಬಲ್ ಹಾಳಾಗಿದ್ದರಿಂದ ಕಂಬಗಳಿಂದಲೇ ಮನೆಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿವೆ. ಅವುಗಳನ್ನು ಪಾಲಿಕೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಸಬೇಕಿದೆ. ಆದರೆ ಯಾವುದೆ ಕಾರಣಕ್ಕೂ ಆ ಕಾಮಗಾರಿಗಳು ಪಾಲಿಕೆಗೆ ಹಸ್ತಾಂತರ ಆಗಬಾರದು.ರಮೇಶ್ ಹೆಗ್ಡೆ, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ
.jpeg)
ಎಲ್ಲೆಂದರಲ್ಲಿ ಯುಜಿಡಿ ಬ್ಲಾಕ್ ಆಗುತ್ತಿದೆ. ಡ್ರೈನೇಜ್‌ಗಳ ಅಗಲ ಮೊದಲಿಗಿಂತಲೂ ಚಿಕ್ಕದಾಗಿದೆ. ಯುಜಿ ಕೇಬಲ್‌ಗಳು ಶಾರ್ಟ್ ಸರ್ಕಿಟ್ ಆಗುತ್ತಿವೆ. ನಮ್ಮ ವಾರ್ಡ್‌ನ ಕೆಲವು ಬೀದಿಗಳಲ್ಲಿ ಲೈಟ್ ಕಂಬಗಳನ್ನೇ ಅಳವಡಿಸಿಲ್ಲ. ಇದರಿಂದ ಕತ್ತಲು ಆವರಿಸಿದೆ.ಸುವರ್ಣಾ ಶಂಕರ್, ಬಿಜೆಪಿ ಪಕ್ಷದ ಪಾಲಿಕೆ ಸದಸ್ಯೆ
ನಮ್ಮ 12ನೇ ವಾರ್ಡ್ ಸಂಪೂರ್ಣ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡಲಿದೆ. ಈಗಾಗಲೇ ಯೋಜನೆ ಪೂರ್ಣಗೊಂಡಿದೆ. ಆದರೆ ಒಂದೇ ಒಂದು ಬೀದಿಯನ್ನೂ ಮಾದರಿ ಬೀದಿ ಎಂದು ಹೇಳಲು ಆಗುತ್ತಿಲ್ಲ. ಕಾಮಗಾರಿಗಳು ಅಪೂರ್ಣವಾಗಿವೆ. 13 ಕನ್ಸರ್‌ವೆನ್ಸಿಯಲ್ಲಿ 8 ಮಾತ್ರ ಅಭಿವೃದ್ಧಿಯಾಗಿದೆ. ನಿರ್ವಹಣೆ ಕೂಡ ಸರಿಯಾಗಿ ನಡೆಯುತ್ತಿಲ್ಲ. ಜನಪ್ರತಿನಿಧಿಗಳಾಗಿ ಜನರಿಗೆ ಉತ್ತರ ನೀಡಲಾಗದ ಅಸಹಾಯಕತೆ ಉಂಟಾಗಿದೆ.ಸುರೇಖಾ ಮುರಳೀಧರ್, ಬಿಜೆಪಿ ಪಕ್ಷದ ಪಾಲಿಕೆ ಸದಸ್ಯೆ

ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಯ ಪಾಲಿಕೆ ಸದಸ್ಯರ ಸಭೆ ಕರೆಯುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೆವು. ಆಗ ಒಂದೇ ಒಂದು ಸಭೆ ಕರೆಯಲಾಗಿತ್ತು. ಆಮೇಲೆ ಒಂದೇ ಒಂದು ಸಭೆ ನಡೆದಿಲ್ಲ. ಈಗ ಕಾಮಗಾರಿ ಮಗಿದಿದೆ. ಪ್ರತಿ ರಸ್ತೆಯನ್ನು ಪಾಲಿಕೆಗೆ ಹ್ಯಾಂಡ್ ಓವರ್ ಮಾಡುವ ಸಂದರ್ಭ ನಾಗರಿಕ ಸಮಿತಿ, ಪಾಲಿಕೆ ಸದಸ್ಯರು, ನಾಗರಿಕರ ಒಪ್ಪಿಗೆ ಪಡೆದು ನಂತರ ಮುಂದುವರೆಯಬೇಕಿದೆ.ಹೆಚ್.ಸಿ.ಯೋಗೇಶ್, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ
ಸಭೆ ನಡೆಸಿ ಸಮಸ್ಯೆ ಪರಿಹಾರ
ಪಾಲಿಕೆ ಸದಸ್ಯರ ಅಭಿಪ್ರಾಯ ಕೇಳಿದ ಬಳಿಕ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಜು.27ರಂದು ಸ್ಮಾರ್ಟ್ ಸಿಟಿ ಗೌರ್ನಿಂಗ್ ಕಮಿಟಿ ಸಭೆ ನಡೆಯಲಿದೆ. ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಈ ವೇಳೆ ಸಮಸ್ಯೆಗಳ ಕುರಿತ ಪ್ರಸ್ತಾಪಿಸುತ್ತೇನೆ. ಈಗಾಗಲೆ ಸ್ಮಾರ್ಟ್ ಸಿಟಿ ಯೋಜನೆಯ ಶೇ.98ರಷ್ಟು ಕೆಲಸ ಪೂರ್ಣಗೊಂಡಿದೆ. ಶೇ.50ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದೆ. ಹೊಸ ಕೆಲಸಗಳಿಗೆ ಅನುದಾನವಿಲ್ಲ ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಆಗಸ್ಟ್ 3ರಂದು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಯ ಪಾಲಿಕೆ ಸದಸ್ಯರು, ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಜೂನ್‌ವರೆಗೆ ಯೋಜನೆ ಅವಧಿ ವಿಸ್ತರಣೆ ಮಾಡಲಾಗಿದೆ. ಅಷ್ಟರಲ್ಲಿ ಸಮಸ್ಯೆಗಳ ಪರಿಹಾರ ಮಾಡಲು ಕಾರ್ಯಪ್ರವೃತ್ತರಾಗೋಣ ಎಂದು ತಿಳಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
shivamoggalive@gmail.com
» Whatsapp Number
7411700200