ಶಿವಮೊಗ್ಗಕ್ಕೆ ಬರ್ತಿದ್ದಾರೆ ಮೂವರು ಕ್ರಿಕೆಟಿಗರು, ಅದ್ಧೂರಿ ಮೆರವಣಿಗೆಗೆ ಪ್ಲಾನ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಶಿವಮೊಗ್ಗ ಯೋಧಾಸ್ ತಂಡದ ಶಿವಮೊಗ್ಗ ವಲಯದ ಮೂವರು ಆಟಗಾರರನ್ನು ಜುಲೈ 20ರಂದು ಸನ್ಮಾನಿಸಿ ಅಭಿನಂದಿಸಲಾಗುವುದು ಎಂದು ಕೆಎಸ್‌ಸಿಎ ನಿರ್ದೇಶಕ ಹಾಗೂ ವಲಯ ಸಂಚಾಲಕ ಡಿ.ಎಸ್.ಅರುಣ್ ತಿಳಿಸಿದರು.

➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೈನಲ್ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಶಿವಮೊಗ್ಗ ಯೋಧಾಸ್ ತಂಡದ ಸಾಧನೆ ಹೆಮ್ಮೆ ತಂದಿದೆ ಎಂದರು.

Shivamogga-Yodhas-Cricketers-to-be-felicitated

ಶಿವಮೊಗ್ಗಕ್ಕೆ ಮೂವರು ಆಟಗಾರರು

ತಂಡದಲ್ಲಿದ್ದ ಸಾಗರದ ಶ್ರೇಯಾಂಕ್, ಚಿಕ್ಕಮಗಳೂರಿನ ಕುಮಾರಸ್ವಾಮಿ ಹಾಗೂ ಹಾಸನದ ಯುನಸ್ ಅಲಿ ಬೇಗ್ ಅವರನ್ನು ಸೋಮವಾರ ಸಂಜೆ 6 ಗಂಟೆಗೆ ಬೆಕ್ಕಿನ ಕಲ್ಮಠ ವೃತ್ತದಿಂದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದವರೆಗೆ ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ಸಂಜೆ 7 ಗಂಟೆಗೆ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಜನಪ್ರತಿನಿಧಿಗಳು, ಹಿರಿಯ ಕ್ರಿಕೆಟಿಗರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌.ಬಿ ಭಾಗವಹಿಸಲಿದ್ದಾರೆ. ನಂತರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಅಕ್ಷಯ್ ಕುಟುಂಬಕ್ಕೆ ₹5 ಲಕ್ಷ ನೆರವು

ಟೂರ್ನಿಯಲ್ಲಿ ಚಾಂಪಿಯನ್ ಆದ ಶಿವಮೊಗ್ಗ ಯೋಧಾಸ್ ತಂಡಕ್ಕೆ ಕೆಎಸ್‌ಸಿಎ ವತಿಯಿಂದ ₹15 ಲಕ್ಷ ನಗದು ಬಹುಮಾನ ಲಭಿಸಿದೆ. ಈ ಮೊತ್ತದಲ್ಲಿ ಇತ್ತೀಚೆಗೆ ನಿಧನರಾದ ಶಿವಮೊಗ್ಗದ ಕ್ರಿಕೆಟ್ ಆಟಗಾರ ಹೆಚ್.ಸಿ. ಅಕ್ಷಯ್ ಅವರ ಕುಟುಂಬಕ್ಕೆ ₹5 ಲಕ್ಷ ನೆರವು ನೀಡಲು ಫ್ರಾಂಚೈಸಿದಾರರು ಒಪ್ಪಿದ್ದಾರೆ. ಅಲ್ಲದೆ, ಅಕ್ಷಯ್ ಪುತ್ರಿಯ ಶಿಕ್ಷಣ ವೆಚ್ಚವನ್ನೂ ಭರಿಸುವುದಾಗಿ ತಿಳಿಸಿದ್ದಾರೆ ಎಂದು ಅರುಣ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿತ್, ಪದಾಧಿಕಾರಿಗಳಾದ ಎಚ್.ಎಸ್. ಸದಾನಂದ್, ಡಿ.ಆರ್. ನಾಗರಾಜ್, ಐಡಿಯಲ್ ಗೋಪಿ, ಯಶವಂತ್ ನಾಯ್ಕ್ ಹಾಗೂ ಚಂದನ್ ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!