ಶಿವಮೊಗ್ಗ: ನಗರದ ಖಾಸಗಿ ಆಸ್ಪತ್ರೆಗಳು ದೀಪಾವಳಿ ಹಬ್ಬದೊಳಗೆ ತಮ್ಮ ಕಟ್ಟಡಗಳ ಸೆಲ್ಲರ್ಗಳಲ್ಲಿ ಕಡ್ಡಾಯವಾಗಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಸೂಚನೆ ನೀಡಿದರು. (ಈ ಸುದ್ದಿಯನ್ನು ಇನ್ನು 51 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಗರದ ಸಂಚಾರ ಪೊಲೀಸ್ ವೃತ್ತ ಕಚೇರಿಯಲ್ಲಿ ಮಹಾನಗರ ಪಾಲಿಕೆ ಎಂಜಿನಿಯರ್ಗಳು ಹಾಗೂ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ಪಾರ್ಕ್ ಬಡಾವಣೆ, ದುರ್ಗಿಗುಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವೈದ್ಯಕೀಯ ಕಟ್ಟಡಗಳು ಹಾಗೂ ಆಸ್ಪತ್ರೆಗಳಿವೆ. ಹಲವು ಆಸ್ಪತ್ರೆಗಳು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದ ಕಾರಣ ಆಸ್ಪತ್ರೆಗೆ ಬರುವವರು ರಸ್ತೆಯುದ್ದಕ್ಕೂ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ ಎಂದರು.
ಇನ್ಸ್ಪೆಕ್ಟರ್ ನೀಡಿದ ಸೂಚನೆಗಳೇನು?
- ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರು ಹಾಗೂ ರೋಗಿಗಳ ವಾಹನ ನಿಲುಗಡೆಗೆ ಆವರಣದಲ್ಲಿ ಅಥವಾ ಸೆಲ್ಲರ್ನಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
- ಕಟ್ಟಡ ನಿರ್ಮಾಣ ನಕ್ಷೆಯಲ್ಲಿ ಪಾರ್ಕಿಂಗ್ಗಾಗಿ ಮೀಸಲಿರಿಸಿದ ಸ್ಥಳವನ್ನು ಕಡ್ಡಾಯವಾಗಿ ವಾಹನಗಳ ನಿಲುಗಡೆಗೆ ಮಾತ್ರ ಬಳಸಬೇಕು.
- ಪಾರ್ಕಿಂಗ್ಗೆಂದು ತೋರಿಸಿದ ಜಾಗವನ್ನು ಲ್ಯಾಬ್, ಔಷಧಾಲಯ ಅಥವಾ ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು.
ನಿಯಮ ಉಲ್ಲಂಘಿಸುವ ಆಸ್ಪತ್ರೆ ಆಡಳಿತ ಮಂಡಳಿಗಳ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಎಚ್ಚರಿಸಿದರು. ಸಭೆಯಲ್ಲಿ ಸಂಚಾರ ಠಾಣೆಯ ಸಿಬ್ಬಂದಿ ಇದ್ದರು.