SHIVAMOGGA LIVE NEWS | 20 AUGUST 2023
SHIMOGA : ಕೆಲವರ ಯಜಮಾನಿಕೆಯ ವ್ಯವಸ್ಥೆಯನ್ನು ಮುರಿದು ಸಮಾನತೆಗಾಗಿ ಹೋರಾಡಿದವರಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು (Devaraj Urs) ಅವರು ಒಬ್ಬರು. ಇದೆ ಕಾರಣಕ್ಕೆ ಅವರು ಅವಮಾನಕ್ಕೆ ಒಳಗಾದರು. ಅರಸು ಅವರಿಂದ ಲಾಭ ಪಡೆದವರು ಇವತ್ತು ಅವರನ್ನು ಸ್ಮರಿಸದಿರುವುದು ವಿಪರ್ಯಾಸ ಎಂದು ಸಾಗರ ಇಂದಿರಾ ಗಾಂಧಿ ಕಾಲೇಜು ಪ್ರಾಧ್ಯಾಪಕ ಬಿ.ಎಲ್.ರಾಜು ಬೇಸರ ವ್ಯಕ್ತಪಡಿಸಿದರು.
ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಹೆಚ್ಚು ಭೂಮಿ, ಬಂಡವಾಳ ಮತ್ತು ಅಧಿಕಾರ ಮೇಲ್ಜಾತಿಯವರ ಬಳಿ ಇತ್ತು. ಇದೆ ಕಾರಣಕ್ಕೆ ಮೇಲ್ಜಾತಿಯವರು ಶ್ರೇಷ್ಠತೆ ಪ್ರದರ್ಶಿಸುತ್ತಿದ್ದರು. ಆದರೆ ದೇವರಾಜ ಅರಸು (Devaraj Urs) ಅವರು ಇಂತಹ ವ್ಯವಸ್ಥೆಯನ್ನು ತೊಡೆದು ಹಾಕಿ ಸಮಾನತೆಗಾಗಿ ಪ್ರಯತ್ನಿಸಿದರು. ರಾಜ ಕುಟುಂಬದ ಹಿನ್ನೆಲೆ ಇದ್ದರು ದೇವರಾಜ ಅರಸು ಅವರು ಸುಖ ಜೀವನಕ್ಕಾಗಿ, ಅಧಿಕಾರಕ್ಕಾಗಿ ಹಂಬಲಿಸದೆ ಕೆಳ ವರ್ಗದವರ ಏಳಿಗೆಗಾಗಿ ಶ್ರಮಿಸಿದರು ಎಂದರು.
ಆಗ ಲಾಭ ಪಡೆದವರು ಈಗ ಸ್ಮರಿಸುತ್ತಿಲ್ಲ
ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ರೂಪಿಸಿದ ಯೋಜನೆಗಳಿಂದ ಕೋಟ್ಯಂತರ ಜನರು ಲಾಭ ಪಡೆದಿದ್ದಾರೆ. ಆದರೆ ಅವರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ವಿವಿಧ ಹಾಸ್ಟೆಲ್‌ಗಳಿಂದ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಆಗ ಲಾಭ ಪಡೆದವರಾರು ದೇವರಾಜ ಅರಸು ಅವರನ್ನು ಈಗ ಸ್ಮರಿಸುತ್ತಿಲ್ಲ. ಅರಸು ಅವರ ಹೋರಾಟ ಮತ್ತು ಆ ಮಾದರಿಯ ರಾಜಕೀಯದ ವಾರಸುದಾರರು ಈಗ ಇಲ್ಲದಿರುವುದು ಬೇಸರ. ಭವಿಷ್ಯದ ಸಮಾಜ ಕಟ್ಟಲು ಮಾದರಿಗಳು ಇರಬೇಕು. ಬುದ್ಧ, ಬಸವೇಶ್ವರ, ಮಹಾತ್ಮ ಗಾಂಧೀಜಿ, ಡಾ. ಅಂಬೇಡ್ಕರ್, ದೇವರಾಜು ಅರಸು ಅವರು ವರ್ತಮಾನದ ಸಮಾಜಕ್ಕೆ ಮಾದರಿಗಳಾಗಿದ್ದಾರೆ. ಯುವಕರು ಈ ನಾಯಕರ ಆದರ್ಶಗಳನ್ನು ಪಾಲಿಸಬೇಕು ಎಂದು ರಾಜು ಹೇಳಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಂಚಾರ ಪೊಲೀಸರಿಂದ ಮತ್ತೆ ದಿಢೀರ್ ಕಾರ್ಯಾಚರಣೆ, ಖುದ್ದು ಫೀಲ್ಡಿಗಿಳಿದ ರಕ್ಷಣಾಧಿಕಾರಿ
ವಿಐಎಸ್‌ಎಲ್ ಕಾರ್ಮಿಕರ ಜೊತೆ ಮಾತು
ಕಾರ್ಯಕ್ರಮದ ಉದ್ಘಾಟನೆ ಮಾಡಿದ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಮಾದರಿಯಾಗಿ ಇರಿಸಿಕೊಂಡು ಇವತ್ತು ಆಡಳಿತ ನಡೆಸಬೇಕಿದೆ. ಅವರ ಅಧಿಕಾರವಧಿಯಲ್ಲಿ ಹಾವನೂರು ಆಯೋಗ ರಚನೆ ಮಾಡಿ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಅರಿತರು. ಆಯಾ ಸಮುದಾಯಕ್ಕೆ ತಕ್ಕ ಯೋಜನೆಗಳನ್ನು ರೂಪಿಸಿದರು. ಮುಖ್ಯಮಂತ್ರಿ ಆಗಿದ್ದಾಗ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿದ್ದರು. ಅಲ್ಲಿ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ತೆರಳುವ ಬದಲು ಕಾರ್ಮಿಕರ ಬಳಿ ಬಂದು ಸಮಸ್ಯೆ ಆಲಿಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸೇರಿದಂತೆ ಜಿಲ್ಲೆಯ ಅನೇಕ ನಾಯಕರು ದೇವರಾಜು ಅರಸು ಅವರ ಗರಡಿಯಲ್ಲಿ ಬೆಳೆದವರು ಎಂದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಅಡುಗೆ ಸಿಬ್ಬಂದಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ವಿ.ರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಓಂಕಾರ್‌ನಾಯ್ಕ್ ಇದ್ದರು.
ಇದಕ್ಕೂ ಮೊದಲು ಶಿವಮೊಗ್ಗದ ಸೈನ್ಸ್ ಮೈದಾನದಿಂದ ಕುವೆಂಪು ರಂಗಮಂದಿರದವರೆಗೆ ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ನೂರಾರು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು