ಶಿವಮೊಗ್ಗ: 65 ವರ್ಷದ ವೃದ್ಧರೊಬ್ಬರನ್ನು ಗಾಢ ನಿದ್ರೆಯಂತೆ ಕಾಡಿದ್ದ ಅತ್ಯಂತ ಅಪರೂಪದ ಆರ್ಟರಿ ಆಫ್ ಪೆರ್ಚೆರಾನ್ ಇನ್ಫಾರ್ಕ್ಷನ್ (Artery of Percheron infarction) ಎಂಬ ಪಾರ್ಶ್ವವಾಯುವಿನಿಂದ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯರು ಮರುಜನ್ಮ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರಿನ ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ವೃದ್ಧರು ಮರುದಿನ ಮುಂಜಾನೆ ಎಷ್ಟೇ ಎಬ್ಬಿಸಿದರೂ ಏಳದೆ, ಕೇವಲ ಅಸ್ಪಷ್ಟ ಶಬ್ದ ಮಾಡುತ್ತಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇದನ್ನು ಅತಿಯಾದ ನಿದ್ದೆ ಅಥವಾ ಬೇರೆ ಸಮಸ್ಯೆ ಎಂದು ಭಾವಿಸಿ ಕುಟುಂಬದವರು ಆರಂಭದಲ್ಲಿ ಕೆಲಕಾಲ ಸುಮ್ಮನಿದ್ದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅವರನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಕರೆತರಲಾಯಿತು.

ನರರೋಗ ತಜ್ಞೆಯಿಂದ ತುರ್ತು ಚಿಕಿತ್ಸೆ
ಆಸ್ಪತ್ರೆಯ ನರರೋಗ ತಜ್ಞೆ ಡಾ. ಹಂಸ ಕೆ.ಎಂ. ಅವರು ತುರ್ತಾಗಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿದಾಗ ಇದು ಅಪರೂಪದ ಸ್ಟ್ರೋಕ್ ಎಂಬುದು ದೃಢಪಟ್ಟಿತು.
ಸಾಮಾನ್ಯವಾಗಿ ಶೇ.4 ರಿಂದ 12 ರಷ್ಟು ಜನರಲ್ಲಿ ಮಾತ್ರ ಮೆದುಳಿನ ಎರಡೂ ಭಾಗಗಳಿಗೆ ರಕ್ತ ಪೂರೈಸಲು ಒಂದೇ ಒಂದು ರಕ್ತನಾಳವಿರುತ್ತದೆ. ಆ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದಾಗ ಮೆದುಳಿನ ಎಚ್ಚರಗೊಳಿಸುವ ವ್ಯವಸ್ಥೆಗೆ ಪೆಟ್ಟು ಬಿದ್ದು ರೋಗಿ ಹಠಾತ್ತನೆ ಕೋಮಾ ಸ್ಥಿತಿಗೆ ಜಾರುತ್ತಾರೆ. ಈ ಸ್ಟ್ರೋಕ್‌ನಲ್ಲಿ ಮುಖ ಸೊಟ್ಟಗಾಗುವುದು ಅಥವಾ ಕೈಕಾಲು ಸ್ವಾಧೀನ ಕಳೆದುಕೊಳ್ಳುವ ಸಾಮಾನ್ಯ ಲಕ್ಷಣಗಳು ಇರುವುದಿಲ್ಲವಾದ್ದರಿಂದ ಇದನ್ನು ಪತ್ತೆಹಚ್ಚುವುದು ಸವಾಲು.
– ಡಾ. ಹಂಸ, ನರರೋಗ ತಜ್ಞೆ, ಸಹ್ಯಾದ್ರಿ ನಾರಾಯಣ ಆಸ್ಪತ್ರೆ
ರೋಗಿಯನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಚಿಕಿತ್ಸೆಗೆ ಇರುವ ನಾಲ್ಕು ಗಂಟೆಯ ಗೋಲ್ಡನ್ ಅವರ್ ಮೀರಿಹೋಗಿತ್ತು. ಹೀಗಾಗಿ, ಅವರನ್ನು ತಕ್ಷಣವೇ ವೆಂಟಿಲೇಟರ್‌ನಲ್ಲಿರಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ವೈದ್ಯರ ಸತತ ಪ್ರಯತ್ನದಿಂದ ಕೇವಲ 48 ಗಂಟೆಗಳಲ್ಲಿ ಚೇತರಿಕೆ ಕಂಡುಬಂದಿದ್ದು, ನಾಲ್ಕೇ ದಿನಗಳಲ್ಲಿ ವೃದ್ಧರು ಯಾವುದೇ ಸಹಾಯವಿಲ್ಲದೆ ತಮ್ಮಷ್ಟಕ್ಕೆ ತಾವೇ ನಡೆದಾಡಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಮಲಗಿದ ವ್ಯಕ್ತಿ ಏಳದಿದ್ದರೆ, ಉಸಿರಾಟದಲ್ಲಿ ಏರುಪೇರು ಅಥವಾ ಬಾಯಲ್ಲಿ ಜೊಲ್ಲು ಸುರಿಯುವ ಲಕ್ಷಣಗಳಿದ್ದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಆಸ್ಪತ್ರೆಗೆ ಕರೆತರುವಂತೆ ಡಾ. ಹಂಸ ಸಲಹೆ ನೀಡಿದ್ದಾರೆ.