ಶಿವಮೊಗ್ಗ: ಮೊದಲ ಬಾರಿ ದಸರಾದಲ್ಲಿ ಭಾಗವಹಿಸಿದ್ದ ಸೋಮಣ್ಣ ಆನೆ ಮೇಲೆ ಅಂಬಾರಿ ಹೊರಿಸುವ ನಿರ್ಧಾರ ಕೈಗೊಂಡಿದ್ದ ಅರಣ್ಯ ಇಲಾಖೆ ಮಹಾ ಎಡವಟ್ಟಿಗೆ ಕಾರಣವಾಗಿದೆ. ಮೆರವಣಿಗೆಯಲ್ಲಿ ಸ್ವಲ್ಪ ದೂರ ಸಾಗಿದ್ದ ಆನೆ ದಿಢೀರನೆ ಹಿಂತಿರುಗಿ ಓಡಿದೆ. ಸಿಟ್ಟಿನಲ್ಲಿ ಅಂಬಾರಿಯನ್ನು ನೆಲಕ್ಕೆ ಉರುಳಿಸಿ ಜಖಂ ಮಾಡಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್ಸೈಟ್ನಲ್ಲಿ. ಈ ಸುದ್ದಿಯ ಮುಂದಿನ 13 ಪ್ಯಾರಾಗಳು ಕೆಳಗಿವೆ.
ಘಟನೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ
ಮಧ್ಯಾಹ್ನ 2:45: ಅಲಂಕೃತಗೊಂಡು ಸಿದ್ಧವಾಗಿದ್ದ ಜಂಬೂಸವಾರಿ ಅನೆಗಳನ್ನು ಜಿಲ್ಲಾ ತರಬೇತಿ ಸಂಸ್ಥೆ ಆವರಣದಿಂದ ಹೊರಗೆ ಕರೆತರಲಾಯಿತು. ಆನೆಗಳನ್ನು ಕಣ್ತುಂಬಿಕೊಳ್ಳಲು ರೆಸ್ತೆಯ ಇಕ್ಕೆಲದಲ್ಲಿಯು ಜನರು ನಿಂತಿದ್ದರು.

ಮಧ್ಯಾಹ್ನ 2:55: ಶಿವಪ್ಪನಾಯಕ ಅರಮನೆ ಮುಂಭಾಗ ಸಕ್ರೆಬೈಲಿನ ಸಾಗರ್, ಸೋಮಣ್ಣ ಮತ್ತು ಬಹದ್ದೂರ್ ಆನೆಗಳು ಬಂದು ನಿಂತವು. ಅದ್ಧೂರಿ ಅಲಂಕಾರದಿಂದ ಮೂರು ಆನೆಗಳು ಕಂಗೊಳಿಸುತ್ತಿದ್ದವು. ಕೆಲವೇ ಕ್ಷಣದಲ್ಲಿ ನಾಡ ದೇವಿ ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿ ಇರುವ ಬೆಳ್ಳಿ ಅಂಬಾರಿಯನ್ನು ಸೋಮಣ್ಣ ಆನೆ ಮೇಲೆ ಹೊರಿಸಲಾಯಿತು.
ಮಧ್ಯಾಹ್ನ 3:30: ನಂದಿ ಧ್ವಜ ಪೂಜೆ ನೆರವೇರಿಸಿ ಜಂಬೂ ಸವಾರಿ ಮೆರವಣಿಗೆ ಆರಂಭಿಸಲಾಯಿತು. ಕೋಟೆ ಶ್ರೀ ಸೀತಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆನೆಗಳಿಗೆ, ನಾಡ ದೇವಿ ಚಾಮುಂಡೇಶ್ವರಿಯ ಅಂಬಾರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಮಧ್ಯಾಹ್ನ 3:53: ಕೋಟೆ ರಸ್ತೆಯ ಜೈನ್ ಸಭಾ ಭವನ ದಾಟಿ ಸ್ವಲ್ಪ ದೂರ ಸಾಗಿದ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಢೀರ್ ಹಿಂತಿರುಗಿತು. ಅಲ್ಲಿಂದ ಓಡಲು ಆರಂಭಿಸಿತು. ಸೋಮಣ್ಣನ ಹಿಂದೆಯೇ ಬಹದ್ದೂರ್ ಆನೆ ಕೂಡ ಓಡಿ ಬಂತು. ಇದರಿಂದ ಮೆರವಣಿಗೆಯಲ್ಲಿದ್ದವರು ಭಯಗೊಂಡು ದಿಕ್ಕಾಪಾಲಾಗಿ ಓಡಿದರು.
ಮಧ್ಯಾಹ್ನ 3:54: ಶಿವಪ್ಪನಾಯಕ ಅರಮನೆ ಮುಂಭಾಗ ಮಂದು ಎರಡು ಆನೆಗಳು ಕ್ಷಣ ಹೊತ್ತು ನಿಂತವು. ಆದರೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ನಿಲ್ಲದೆ ಮುಂದಕ್ಕೆ ಸಾಗಿತು. ಸೋಮಣ್ಣ ಆನೆ ಮುಂದೆ ಸಾಗದೆ ಅರಮನೆ ಮುಂಭಾಗದಲ್ಲಿಯೆ ನಿಂತಿತು.
ಮಧ್ಯಾಹ್ನ 3:55: ವಾಸವಿ ಶಾಲೆ ಎದುರು ಖಾಲಿ ಜಾಗಕ್ಕೆ ಸೋಮಣ್ಣ ಆನೆ ನುಗಿತು. ಸಕ್ರೆಬೈಲಿನಿಂದ ಆನೆಗಳನ್ನು ಕರೆತಂದಾಗ ಇಲ್ಲಿಯೇ ರಾಂಪ್ ನಿರ್ಮಿಸಿ ಆನೆಗಳನ್ನು ಲಾರಿಯಿಂದ ಕೆಳಗೆ ಇಳಿಸಲಾಗಿತ್ತು. ಆದರೆ ಮೈಮೇಲೆ ಅಂಬಾರಿ ಇನ್ನೂ ಇದ್ದಿದ್ದರಿಂದ ಸೋಮಣ್ಣ ಆನೆ ಸಿಟ್ಟಾಯಿತು. ಅಲ್ಲಿಂದ ಸಣ್ಣ ಜಾಗದಲ್ಲಿಯೇ ನುಗ್ಗಿತು. ಆಂಬಾರಿಯನ್ನು ಅಕ್ಕಪಕ್ಕದ ಕಟ್ಟಡಗಳಿಗೆ ಗುದ್ದಿತು. ಅಲ್ಲಿಂದ ಪಕ್ಕದ ರಸ್ತೆಗೆ ನುಗ್ಗಿತು.
ಮಧ್ಯಾಹ್ನ 3:56: ಪಕ್ಕದ ರಸ್ತೆಯಿಂದ ಕೋಟೆ ಪೊಲೀಸ್ ಠಾಣೆ ದಿಕ್ಕಿಗೆ ನುಗ್ಗಿದ ಸೋಮಣ್ಣ ಆನೆ ಕೆಲವು ಹೆಜ್ಜೆ ಇಟ್ಟು ಹಿಂದಕ್ಕೆ ತಿರುಗಿತು. ಜೈನ್ ಶಾಲೆ ಪಕ್ಕದ ಮನೆಯ ಆವರಣಕ್ಕೆ ನುಗ್ಗಿತು. ಅಲ್ಲಿ ಮನೆಗೆ ಮೇಲ್ಛಾವಣಿಗೆ ಗುದ್ದಿದ್ದರಿಂದ ಹೆಂಚುಗಳು ಪುಡಿಯಾದವು.
ಮಧ್ಯಾಹ್ನ 3:56: ಪುನಃ ಕೋಟೆ ರಸ್ತೆ ನುಗ್ಗಿದ ಸೋಮಣ್ಣ. ಅಷ್ಟರಲ್ಲಿ ಅಂಬಾರಿಯು ಬಲಭಾಗಕ್ಕೆ ವಾಲಿಕೊಂಡಿತ್ತು. ಅಂಚೆ ಕಚೇರಿ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದಾಗ ಅಂಬಾರಿ ಸಂಪೂರ್ಣ ಬಲಭಾಗಕ್ಕೆ ವಾಲಿತು. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿಗೆ ತಾಗಿತು. ಇದರಿಂದ ಸಿಟ್ಟಾದ ಸೋಮಣ್ಣ ಆನೆ, ಕಾರಿನ ವಿರುದ್ಧ ಆಕ್ರೋಶಗೊಂಡಿತು. ಕಾರನ್ನು ಎತ್ತಿ ಹಾಕಿತು.
ಮಧ್ಯಾಹ್ನ 3:58: ಅಂಚೆ ಇಲಾಖೆ ಮುಂಭಾಗ ಬಹದ್ದೂರ್ ಆನೆಯ ಮೂಲಕ ಸೋಮಣ್ಣ ಅನೆ ಮುಂದೆ ಸಾಗದಂತೆ ನಿಯಂತ್ರಿಸಲಾಯಿತು. ಅಷ್ಟರಲ್ಲಿ ಅಂಬಾರಿ ಕೆಳಗೆ ಬಿದ್ದಿತ್ತು. ಆಗ ಸೋಮಣ್ಣ ಆನೆ ಶಾಂತ ಸ್ಥಿತಿಗೆ ತಲುಪಿತು. ಅಷ್ಟರಲ್ಲಿ ಆನೆ ವೈದ್ಯರು ಅರಿವಳಿಕೆಯನ್ನು ಫೈರ್ ಮಾಡಿದ್ದರು. ಹಾಗಾಗಿ ಸೋಮಣ್ಣ ಆನೆ ಸಂಪೂರ್ನ ಸಹಜ ಸ್ಥಿತಿಗೆ ಮರಳಿತು.
ಸಂಜೆ 4:17: ಎರಡು ಆನೆಗಳು ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದೊಳಗೆ ಹೋದವು. ಸೋಮಣ್ಣ ಆನೆಗೆ ಕಟ್ಟಿದ್ದ ಅಂಬಾರಿ ನೆಲಕ್ಕೆ ಉರುಳಿತ್ತು. ಆದರೆ ಅಂಬಾರಿಗೆ ಕಟ್ಟಿದ್ದ ಬಿಚ್ಚಿರಲಿಲ್ಲ. ಹಾಗಾಗಿ ಅಂಬಾರಿಯನ್ನು ಎಳೆದುಕೊಂಡೇ ದೇಗುಲದ ಆವರಣದೊಳಗೆ ಹೋಯಿತು. ಅಲ್ಲಿ ಆನೆಗೆ ಪುನಃ ಅರಿವಳಿಕೆ ನೀಡಲಾಯಿತು.
ಸಂಜೆ 5 ಗಂಟೆ: ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಸೋಮಣ್ಣ ಆನೆಯನ್ನು ಹೊರಗೆ ಕರೆತರಲಾಯಿತು. ಆನೆಯ ಕಾಲುಗಳಿಗೆ ಸರಪಳಿ ಹಾಕಲಾಗಿತ್ತು. ಶಾಂತಚಿತ್ತನಾಗಿದ್ದ ಸೋಮಣ್ಣನನ್ನು ಬಹದ್ದೂರ್ ಆನೆಯ ಜೊತೆಗೆ ಜಿಲ್ಲಾ ತರಬೇತಿ ಸಂಸ್ಥೆಯ ತನಕ ಕರೆದೊಯ್ಯಲಾಯಿತು. ಅಲ್ಲಿ ಆನೆಗಳಿಗೆ ಪುನಃ ಆಹಾರ ನೀಡಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಲಾಯಿತು.