ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MARCH 2021
ರಮೇಶ್ ಜಾರಕಿಹೊಳಿ ಸಿಡಿ ವಿಚಾರ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಈ ನಡುವೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಿಡಿ ವಿಚಾರ ಮಾತನಾಡೋಕೆ ತಮಗೆ ವಾಕರಿಗೆ ಬರುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಸಿಡಿ ವಿಚಾರದ ಬಗ್ಗೆ ತನ್ನನ್ನು ಏನೂ ಕೇಳಬೇಡಿ. ಅದು ಅವರು ಅವರಿಗೆ ಬಿಟ್ಟಿ ವಿಚಾರ. ಸಿಡಿ ವಿಚಾರ ಮಾತನಾಡಲು ನನಗೆ ವಾಕರಿಗೆ ಬರುತ್ತದೆ. ನನಗೆ ಸಿಡಿ ವಿಚಾರದಲ್ಲಿ ಆಸಕ್ತಿ ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಎಲ್ಲಾ ಚುನಾವಣೆಯಲ್ಲೂ ನಮ್ಮದೆ ಗೆಲುವು
ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಬಿಜೆಪಿ ಗೆಲುವು ನಿಶ್ಚಿತ. ಇತ್ತೀಚಿಗೆ ನಡೆದ ಉಪಚುನಾವಣೆಗಳ ಪೈಕಿ 17 ರಲ್ಲಿ 14ನ್ನು ನಾವು ಗೆದ್ದಿದ್ದೇವೆ. ಇದೀಗ ಬಸವಕಲ್ಯಾಣ, ಮಸ್ಕಿ ಮತ್ತು ಬೆಳಗಾವಿಗೆ ಉಪಚುನಾವಣೆ ಘೋಷಣೆಯಾಗಿದೆ. ಮಾರ್ಚ್ 30 ರಂದು ನಮ್ಮ ಅಭ್ಯರ್ಥಿ ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷರು, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ನಾನು ಸೇರಿದಂತೆ ಎಲ್ಲರೂ ಹೋಗ್ತೇವೆ ಎಂದು ಈಶ್ವರಪ್ಪ ತಿಳಿಸಿದರು.
ಮೂರು ಕ್ಷೇತ್ರದಲ್ಲೂ ಗೆಲ್ಲುತ್ತೇವೆ
ಕೆಲವು ಪಕ್ಷಗಳು ಅಭ್ಯರ್ಥಿಗಳನ್ನೇ ಹಾಕಲ್ಲ. ಇನ್ನೂ ಕೆಲವು ಪಕ್ಷ ನೆಪಮಾತ್ರಕ್ಕೆ ಅಭ್ಯರ್ಥಿ ಕಣಕ್ಕಿಳಿಸುತ್ತಿದ್ದಾರೆ. ಮೂರು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಕಾರ್ಯಕರ್ತರ ಸಂಘಟನೆಯ ಬಲದಿಂದ ಗೆಲ್ಲುತ್ತೇವೆ ಎಂದ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಿಧ ಕಾಮಗಾರಿ ಚಾಲನೆ
ಇದೆ ವೇಳೆ ಶಿವಮೊಗ್ಗ ನಗರದ ವಿವಿಧೆಡೆ ಭೇಟಿ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು. ಗೋಪಾಳ 2ನೇ ಹಂತದ ವಸತಿ ಬಡಾವಣೆಯಲ್ಲಿ 25 ಲಕ್ಷ ವೆಚ್ಚದಲ್ಲಿ ಉದ್ಯಾನವ ಅಭಿವೃದ್ಧಿ, 25 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ಬಾಕ್ಸ್ ಚರಂಡಿ ಯೋಜನೆಗೆ ಚಾಲನೆ ನೀಡಿದರು.
ವಿಕಾಸ ಶಾಲೆ ಬಳಿ 65 ಲಕ್ಷ ವೆಚ್ಚದ ಕೆರೆ ಅಭಿವೃದ್ದಿ ಯೋಜನೆ, ಕಟ್ಟೆ ಸುಬ್ಬಣ್ಣ ಕಲ್ಯಾಣ ಮಂದಿರ ಹಿಂಭಾಗ ಕೆರೆಗೆ 80 ಲಕ್ಷ ವೆಚ್ಚದ ಅಭಿವೃದ್ದಿ ಕಾರ್ಯಕ್ಕೆ ಚಾಲನೆ. ಕಲ್ಲಹಳ್ಳಿ ಕೆಹೆಚ್ಬಿ ಕಾಲೋನಿ ಸಿ-ಬ್ಲಾಕ್ನಲ್ಲಿ ಉದ್ಯಾನವ, ಆಶ್ರಯ ಬಡಾವಣೆಯ ಉದ್ಯಾನಗಳ ಅಭಿವೃದ್ಧಿಗೆ ತಲಾ 25 ಲಕ್ಷ ರೂ. , 20 ಲಕ್ಷ ರೂ . ವೆಚ್ಚದಲ್ಲಿ ಮಾಧವ ನೆಲೆ ಮುಂಭಾಗದ ಉದ್ಯಾನ, 75 ಲಕ್ಷ ರೂ. ವೆಚ್ಚದಲ್ಲಿ ಪ್ರಿಯದರ್ಶಿನಿ ಲೇಔಟ್ನ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಸಚಿವ ಈಶ್ವರಪ್ಪ ಚಾಲನೆ ನೀಡಿದರು.
25 ಲಕ್ಷ ರೂ. ವೆಚ್ಚದ ಕುವೆಂಪು ನಗರ ವಸತಿ ಬಾಡಾವಣೆಯ ಬಿ ಮತ್ತು ಸಿ ಬ್ಲಾಕ್ ಉದ್ಯಾನ, 25 ಲಕ್ಷದಲ್ಲಿ ರಸ್ತೆ ಅಭಿವೃದ್ಧಿ , 15 ಲಕ್ಷ ವೆಚ್ಚದಲ್ಲಿ ಮುಖ್ಯ ರಸ್ತೆಗೆ ಎಲ್ಇಡಿ ಬೀದಿ ದೀಪ ಅಳವಡಿಸುವ ಕಾರ್ಯಕ್ಕೆ ಸಚಿವ ಈಶ್ವರಪ್ಪ ಚಾಲನೆ ನೀಡಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]