ಶಿವಮೊಗ್ಗ: ಜಿಲ್ಲಾಸ್ಪತ್ರೆ ಹಾಗೂ ಎಂಪಾನೆಲ್ಡ್ ಖಾಸಗಿ ಆಸ್ಪತ್ರೆಗಳಲ್ಲಿ ಇಎಸ್ಐ ಫಲಾನುಭವಿಗಳಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಸೇವೆಗಳು ಮತ್ತು ವಿಮಾ ಸೌಲಭ್ಯಗಳ ಕುರಿತು ಸಭೆ ನಡೆಯಿತು. (ಈ ಸುದ್ದಿಯನ್ನು ಇನ್ನು 77 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರು ಅಧಿಕಾರಿಗಳು ಹಾಗೂ ಆಸ್ಪತ್ರೆಗಳ ಆಡಳಿತ ಮಂಡಳಿಗೆ ಪ್ರಮುಖ ಸೂಚನೆಗಳನ್ನು ನೀಡಿದರು. ಇಲ್ಲಿದೆ ಪಾಯಿಂಟ್ಸ್

- ಮೆಗ್ಗಾನ್ ಜಿಲ್ಲಾಸ್ಪತ್ರೆ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಇಎಸ್ಐ ಕಾರ್ಮಿಕರಿಗಾಗಿ ಪ್ರತ್ಯೇಕ ಓಪಿಡಿ ಕೌಂಟರ್ಗಳನ್ನು ತೆರೆಯಬೇಕು. ಚಿಕಿತ್ಸೆಯಲ್ಲಿ ಆದ್ಯತೆ ನೀಡಬೇಕು.
- ಇಎಸ್ಐ ನಿಗಮ ನಿಗದಿಪಡಿಸಿರುವ ಪ್ಯಾಕೇಜ್ ದರದಲ್ಲೇ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕು. ಕಾರ್ಮಿಕರಿಂದ ಒಂದು ರೂಪಾಯಿಯನ್ನೂ ಹೆಚ್ಚುವರಿಯಾಗಿ ಪಡೆಯಬಾರದು.
- ಇಎಸ್ಐ ಡಿಸ್ಪೆನ್ಸರಿಗೆ ಬರುವ ಕಾರ್ಮಿಕರಿಗೆ ಅಗತ್ಯವಿದ್ದಲ್ಲಿ ಹೊರರೋಗಿ ವಿಭಾಗದ ಚಿಕಿತ್ಸೆಗೂ ಕಡ್ಡಾಯವಾಗಿ ರೆಫರಲ್ ಸ್ಲಿಪ್ ನೀಡಬೇಕು.
- ಕೇಂದ್ರ ಸರ್ಕಾರದ 2023ರ ಎಸ್ಒಪಿ ಪ್ರಕಾರವೇ 4 ಹಂತದ ಚಿಕಿತ್ಸಾ ನಿಯಮಗಳನ್ನು ಪಾಲಿಸಬೇಕು. ಕಾನೂನಿನ ಚೌಕಟ್ಟಿನೊಳಗೆ ಕಾರ್ಮಿಕರಿಗೆ ಅನ್ಯಾಯವಾಗದಂತೆ ಸುಗಮ ಸೇವೆ ಒದಗಿಸಬೇಕು.
ಚಿಕಿತ್ಸಾ ದರ ಹೆಚ್ಚಳ
ಕೇಂದ್ರ ಸರ್ಕಾರವು ಸಿಜಿಎಚ್ಎಸ್ (CGHS) ಚಿಕಿತ್ಸಾ ದರಗಳನ್ನು 2 ರಿಂದ 4 ಪಟ್ಟು ಹೆಚ್ಚಿಸಿದೆ. ಹೃದಯ ಶಸ್ತ್ರಚಿಕಿತ್ಸೆ ಮಿತಿಯನ್ನು ₹12 ಲಕ್ಷದವರೆಗೆ ಹಾಗೂ ಓಪಿಡಿ ಶುಲ್ಕವನ್ನು ₹700 ರಿಂದ ₹800 ರವರೆಗೆ ಏರಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಪಾರದರ್ಶಕತೆಗೆ ಜಿಯೋ ಟ್ಯಾಗಿಂಗ್
ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟಾಲಿ ಮಾತನಾಡಿ, ಇಎಸ್ಐ ಫಲಾನುಭವಿಗಳು ಹಾಗೂ ಆಸ್ಪತ್ರೆಗಳಿಗೆ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುವುದು. ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ರೋಗಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಜಿಯೋ ಟ್ಯಾಗಿಂಗ್ ಜಾರಿಗೆ ತರಲಾಗುವುದು ಎಂದರು.
ಜಿಲ್ಲೆಗೆ ಮಂಜೂರಾಗಿರುವ ಇಎಸ್ಐ ಆಸ್ಪತ್ರೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಜಿ.ಪಂ. ಸಿಇಒ ರಿಷಿ ಆನಂದ್, ಡಿಎಚ್ಒ ಡಾ. ಕಾಂತರಾಜು ಹಾಗೂ ಇಎಸ್ಐ ಕಾರ್ಮಿಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.