ಶಿವಮೊಗ್ಗ: ರಂಗ ದಸರಾ ಅಂಗವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯು ಕುಟುಂಬ ರಂಗ ಕಾರ್ಯಕ್ರಮ ಆಯೋಜಿಸಿದೆ. ಕುಟುಂಬ ಸದಸ್ಯರು ಹಾಗೂ ಅಕ್ಕಪಕ್ಕದ ಮನೆಯವರು ಸೇರಿ ಕಿರು ನಾಟಕ ಪ್ರದರ್ಶಿಸಲು ಅವಕಾಶ ಕಲ್ಪಿಸಿದೆ.
5 ರಿಂದ 12 ಜನರ ತಂಡ ರಚಿಸಿ ಮನೆಯಲ್ಲೇ ಅಥವಾ ಸಮೀಪದ ಅನುಕೂಲಕರ ಸ್ಥಳದಲ್ಲಿ ಗರಿಷ್ಠ ಅರ್ಧ ಗಂಟೆಯ ಕಿರು ನಾಟಕ ಪ್ರದರ್ಶಿಸಬಹುದು. ವಿವಾದಾತ್ಮಕ ಅಥವಾ ಸಮಾಜದ ಶಾಂತಿಗೆ ಭಂಗ ಉಂಟುಮಾಡುವ ವಿಷಯಗಳನ್ನು ನಾಟಕದಲ್ಲಿ ಬಳಸುವಂತಿಲ್ಲ ಎಂದು ತಿಳಿಸಲಾಗಿದೆ.

ನೋಂದಣಿ ಮಾಡಿಕೊಳ್ಳುವ ತಂಡಗಳ ಪೈಕಿ ಮೆಚ್ಚುಗೆ ಪಡೆದ ನಾಲ್ಕು ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ತಂಡಗಳಿಗೆ ಅಕ್ಟೋಬರ್ 19ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ.
ನಾಟಕ ಪ್ರದರ್ಶಿಸಲು ನೋಂದಾಯಿಸಿಕೊಳ್ಳುವ ಮೊದಲ 20 ಸಾರ್ವಜನಿಕ ಕುಟುಂಬಗಳಿಗೆ ರಂಗ ದಸರಾ ಸಮಿತಿಯಿಂದ ₹1,000 ಪ್ರೋತ್ಸಾಹಧನ ನೀಡಲಾಗುತ್ತದೆ. ಆಸಕ್ತರು ತಮ್ಮ ಹೆಸರು ಅಥವಾ ತಂಡದ ಹೆಸರನ್ನು ಅಕ್ಟೋಬರ್ 8ರೊಳಗೆ ರಂಗ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳ ಕಚೇರಿ, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 8105918314, 7676516154, 9448414752 ಅಥವಾ 9449925746 ಸಂಪರ್ಕಿಸಬಹುದು.