ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಮೂಹದ ವತಿಯಿಂದ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿವೃತ್ತ ಮುಖ್ಯಸ್ಥ ಪ್ರೊ.ಕೆ.ಚಂದ್ರಶೇಖರ್ ಅಭಿನಂದನಾ ಸಮಾರಂಭ (FELICITATION) ನಡೆಸಲಾಯಿತು. ಶಿವಮೊಗ್ಗದ ಪತ್ರಿಕಾ ಭವನದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ನಿವೃತ್ತ ಕುಲಸಚಿವ ಪ್ರೊ.ಶ್ರೀಕಂಠ ಕೂಡಿಗೆ ವಿಶ್ವವಿದ್ಯಾಲಯಗಳ ಪ್ರಸ್ತುತ ವ್ಯವಸ್ಥೆ ಕುರಿತು ಬೇಸರ ವ್ಯಕ್ತಪಡಿಸಿದರು. ಇಲ್ಲಿದೆ ಪ್ರೊ. ಶೀಕಂಠ ಕೂಡಿಗೆ ಅವರ ಹೇಳಿದ ಮೂರು ಪ್ರಮುಖ ಪಾಯಿಂಟ್
ಅಧ್ಯಾಪಕರು ನಿವೃತ್ತರಾಗುತ್ತಿದ್ದರೂ, ಪೂರ್ಣ ಪ್ರಮಾಣದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಹೀಗಾಗಿ ವಿಶ್ವ ವಿದ್ಯಾಲಯಗಳು ಗುಣಾತ್ಮಕ ಶಿಕ್ಷಣ ನೀಡುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಈ ಹಿಂದೆ ಸುವ್ಯವಸ್ಥಿತ ಕಟ್ಟಡ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದ್ದರೂ, ನುರಿತ, ಅನುಭವಿ ಅಧ್ಯಾಪಕರ ಬಲವಿತ್ತು. ಅಂದು ಸಿಕ್ಕ ಗುಣಾತ್ಮಕ ಶಿಕ್ಷಣದಿಂದ ಇಂದು ಸಾವಿರಾರು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಆದರೆ, ಬಹುತೇಕ ವಿಶ್ವವಿದ್ಯಾಲಯಗಳು ಇಂದು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಜಾತಿ ಸಂಘಟನೆಗಳನ್ನು ಕಟ್ಟಿಕೊಂಡು ಕ್ಯಾಂಪಸ್ ವಾತಾವರಣ ಹಾಳು ಮಾಡುತ್ತಿದ್ದಾರೆ. ಯಾವುದೇ ಜಾತಿಯ ಸಂಘಟನೆಗಳಿಗೆ ಅವಕಾಶ ನೀಡಬಾರದು. ಕೆಲ ಅಧ್ಯಾಪಕರು ಬೋಧನೆ ಮಾಡುವ ಬದಲು ಹಣ ಗಳಿಕೆಯತ್ತ ಗಮನ ಹರಿಸುತ್ತಿದ್ದಾರೆ. ನಾನು ಹಾಗೂ ಚಂದ್ರಶೇಖರ್ ಅವರು ಅಧ್ಯಾಪಕರಾದ ಅವಧಿಯಲ್ಲಿ ಯಾವತ್ತೂ ಜಾತಿಭೇದ ಮಾಡಲಿಲ್ಲ. ಹಣ ಗಳಿಸುವ ಆಲೋಚನೆಯೂ ಬರಲಿಲ್ಲ. ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇವೆ ಎಂದರು.
ಪ್ರೊ.ಚಂದ್ರಶೇಖರ್ ಅವರು ಅತ್ಯಂತ ಪ್ರಾಮಾಣಿಕರು. 16 ವಿದ್ವತ್‌ಪೂರ್ಣ ಗ್ರಂಥಗಳನ್ನು ಬರೆದಿದ್ದಾರೆ. ಅವರ ಹಲವು ಗ್ರಂಥಗಳು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತವೆ. ಅವರ ಪ್ರತಿಭೆಯನ್ನು ವಿಶ್ವವಿದ್ಯಾಲಯವೇ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ನಿವೃತ್ತಿಯ ನಂತರವಾದರೂ ರಾಜ್ಯದ ಇತರೆ ವಿಶ್ವವಿದ್ಯಾಲಯಗಳು ಅವರ ಜ್ಞಾನ, ಸೇವೆ ಬಳಸಿಕೊಳ್ಳಬಹುದು ಎಂದು ಪ್ರೊ. ಶ್ರೀಕಂಠ ಕೂಡಿಗೆ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮ ವ್ಯವಸ್ಥೆ ಬಲಪಡಿಸಬೇಕು
ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿವೃತ್ತ ಮುಖ್ಯಸ್ಥ ಪ್ರೊ.ಕೆ. ಚಂದ್ರಶೇಖರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಜನರ ಬದುಕಿನ ಮಹತ್ವದ ಸ್ತರಗಳಾದ ಗ್ರಾಮ ವ್ಯವಸ್ಥೆ ಬಲಗೊಳಿಸಲು ಶ್ರಮಿಸಿದ್ದೇನೆ ಎಂದು ಹೇಳಿದರು.
ಗ್ರಾಮ ವ್ಯವಸ್ಥೆಯ ಅಭಿವೃದ್ಧಿಗೆ ಶ್ರಮಿಸಲು ರಾಜ್ಯ ಸರ್ಕಾರ ಐದು ವರ್ಷ ಅವಕಾಶ ಮಾಡಿಕೊಟ್ಟಿತ್ತು. ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಕೆಲಸ ಮಾಡಿದ್ದೇನೆ. ರಾಜ್ಯದ ಹಲವೆಡೆ ಪ್ರವಾಸ ಮಾಡಿ, ಪಂಚಾಯಿತಿಗಳ ಬಲವರ್ಧನೆಗೆ ಹಲವು ಸಲಹೆ, ಶಿಫಾರಸು, ಕೃತಿಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ನೀಡಿದ್ದೇನೆ. ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡಲು ಕ್ರಮ ಕೈಗೊಂಡಿದ್ದೇನೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಪ್ರೊ. ಹೂವಯ್ಯಗೌಡ, ಪತ್ರಿಕೋದ್ಯಮ ವಿಭಾಗದ ನಿವೃತ್ತ ಮುಖ್ಯಸ್ಥ ಪೂರ್ಣಾನಂದ, ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ದತ್ತಾತ್ರೇಯ, ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಎಂ.ಎಚ್. ಪ್ರಹ್ಲಾದಪ್ಪ ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿಗಳಾದ ರಾಘವೇಂದ್ರ ಕಿಣಿ, ಪಿ. ಆಶಾ, ಕುಮಾರಸ್ವಾಮಿ, ಚಂದ್ರಹಾಸ ಹಿರೇಮಳಲಿ, ದಯಾನಂದ್, ರಾಮಣ್ಣ, ಸೋಮಶೇಖರ್, ಗಂಗಾಧರ್, ಉಪೇಂದ್ರ ಘೋರ್ಪಡೆ, ಮಂಜುನಾಥ್, ಜಯಪ್ರಕಾಶ್, ಪಂಕಜಾ, ಶಿವಣ್ಣ, ಶೈಲಜಾ ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ » VISL ಕಾರ್ಮಿಕರಿಗೆ ಪೇಜಾವರ ಸ್ವಾಮೀಜಿ ಅಭಯ, ಏನಂದ್ರು ಶ್ರೀಗಳು?

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200