ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜೂನ್ 2020
ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರನ ವಿರುದ್ಧ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು 50 ಲಕ್ಷ ರುಪಾಯಿಯ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಇನ್ನು ಆರು ತಿಂಗಳಲ್ಲಿ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

50 ಲಕ್ಷ ರೂ ಪಡೆದಿರುವ ಆರೋಪ
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಇನ್ಸ್ಪೆಕ್ಟರ್ ಒಬ್ಬರ ವರ್ಗಾವಣೆ ವಿಚಾರದಲ್ಲಿ 50 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರ ಇರುವಷ್ಟು ಅವಧಿಯಲ್ಲಿ ಹಣ ಮಾಡಬೇಕು ಎಂದು ಯೋಚಿಸಿದಂತಿದೆ ಎಂದು ಟೀಕಿಸಿದರು.

ಹಳ್ಳಿ ಹಕ್ಕಿಗೆ ಆಗಬೇಕಾದದ್ದೇ
ಹೆಚ್.ವಿಶ್ವನಾಥ್ ಅವರಿಗೆ ಜೆಡಿಎಸ್ ಪಕ್ಷದ ವರಿಷ್ಠ ಹಚ್.ಡಿ.ದೇವೇಗೌಡ ಅವರು ಉನ್ನತ ಸ್ಥಾನ ನೀಡಿದ್ದರು. ಕಾಂಗ್ರೆಸ್ ಪಕ್ಷದಲ್ಲೂ ಅಧಿಕಾರ ಅನುಭವಿಸಿದ್ದರು. ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರಿಗೆ ಟಿಕೆಟ್ ತಪ್ಪಿದೆ. ಹಳ್ಳಿ ಹಕ್ಕಿಗೆ ಇದು ಆಗಬೇಕಾದದ್ದೇ ಎಂದು ವ್ಯಂಗ್ಯ ಮಾಡಿದರು.
ಮಾನಸ ಪುತ್ರನಿಂದಲೇ ಬೀಳುತ್ತೆ ಸರ್ಕಾರ
ಯಡಿಯೂರಪ್ಪ ಅವರು ಮುಳ್ಳಿನ ಕುರ್ಚಿ ಮೇಲೆ ಕೂತಿದ್ದಾರೆ. ಹೆಚ್ಚು ಕಾಲ ಅದರ ಮೇಲೆ ಕೂರಲು ಅವರಿಗೆ ಸಾದ್ಯವಿಲ್ಲ. ಮಾನಸ ಪುತ್ರ ಅಂತಾ ಹೇಳಿಕೊಂಡು ಓಡಾಡುತ್ತಿರುವವರೊಬ್ಬರಿಂದಲೇ ಅವರು ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com





